×
Ad

ಯೆಮನ್ ನಲ್ಲಿ ಹೌದಿ ನೆಲೆಗಳ ಮೇಲೆ ಅಮೆರಿಕ, ಬ್ರಿಟನ್ ದಾಳಿ 5 ಹೌದಿಗಳ ಮೃತ್ಯು; 6 ಮಂದಿಗೆ ಗಾಯ

Update: 2024-01-12 22:20 IST

Photo: NDTV 

ವಾಷಿಂಗ್ಟನ್: ಯೆಮನ್ನಲ್ಲಿ ಹೌದಿಗಳ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಗುರಿಯಾಗಿಸಿ ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳ ಪಡೆ ನಡೆಸಿದ ದಾಳಿಯಲ್ಲಿ ಐದು ಮಂದಿ ಹೋರಾಟಗಾರರು ಸಾವನ್ನಪ್ಪಿದ್ದು ಇತರ 6 ಮಂದಿ ಗಾಯಗೊಂಡಿರುವುದಾಗಿ ಹೌದಿ ವಕ್ತಾರರು ಹೇಳಿದ್ದಾರೆ.

ಇರಾನ್ ಮೂಲದ ಹೌದಿ ಬಂಡುಗೋರರ ಗುಂಪು ಕೆಂಪು ಸಮುದ್ರದ ಮೂಲಕ ಸಾಗುತ್ತಿದ್ದ ಸರಕು ನೌಕೆಗಳನ್ನು ಗುರಿಯಾಗಿಸಿ ಸರಣಿ ದಾಳಿಗಳನ್ನು ನಡೆಸಿದ್ದಕ್ಕೆ ಪ್ರತಿಯಾಗಿ ದಾಳಿ ನಡೆದಿದೆ. ಹೌದಿಗಳ ದಾಳಿಯ ಕೇಂದ್ರನೆಲೆಯನ್ನು ಗುರಿಯಾಗಿಸಿ ದಾಳಿ ನಡೆದಿದ್ದು ಯೆಮನ್ ರಾಜಧಾನಿ ಸನಾ ಮತ್ತು ಬಂದರು ನಗರ ಅಲ್ ಹುದಾಯ್ದ ನಗರಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ ಎಂದು ಅಮೆರಿಕ ಹೇಳಿದೆ. ಪ್ರತಿ ದಾಳಿಯಲ್ಲಿ ಹೌದಿಗಳ ನೆಲೆ ಧ್ವಂಸವಾಗಿದೆ ಜತೆಗೆ ಇಸ್ರೇಲ್-ಹಮಾಸ್ ಯುದ್ಧದ ನಡುವೆ ಈ ವಲಯದಲ್ಲಿ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಿಸಿದೆ. ಕೆಂಪು ಸಮುದ್ರದಲ್ಲಿ ಸರಕು ನೌಕೆಗಳ ಮೇಲಿನ ದಾಳಿಯಿಂದ ಹಲವು ದೇಶಗಳ ಆಮದು-ರಫ್ತು ಸರಪಳಿಗೆ ತೊಡಕಾಗಿದೆ ಮತ್ತು ತೈಲ ದರದಲ್ಲಿ ಏರಿಕೆಯಾಗಿದೆ.

ಕೆಂಪು ಸಮುದ್ರದಲ್ಲಿ ವಾಣಿಜ್ಯ ನೌಕೆಗಳ ಮೇಲಿನ ದಾಳಿ ಮುಂದುವರಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಬೈಡನ್ ಬುಧವಾರ ಎಚ್ಚರಿಕೆ ನೀಡಿದ್ದರು. ಹೌದಿಗಳ ವಿರುದ್ಧದ ಕಠಿಣ ಕ್ರಮಕ್ಕೆ ಬೆಂಬಲ ಕ್ರೋಢೀಕರಿಸುವ ಉದ್ದೇಶದಿಂದ ಗುರುವಾರ ಅಮೆರಿಕದ ವಿದೇಶಾಂಗ ಸಚಿವ ಆಂಥೊನಿ ಬ್ಲಿಂಕೆನ್ ಮಧ್ಯಪ್ರಾಚ್ಯಕ್ಕೆ ಭೇಟಿ ನೀಡಿದ್ದರು. ಅಮೆರಿಕದ ಆಡಳಿತ ಪ್ರಸ್ತಾವಿಸಿದ್ದ ದಾಳಿಯನ್ನು ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅನುಮೋದಿಸಿದ್ದರು ಎಂದು `ಬ್ಲೂಮ್ಬರ್ಗ್' ವರದಿ ಮಾಡಿದೆ.

ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ವಿರೋಧಿಸಿ ಮತ್ತು ಹಮಾಸ್ ಬೆಂಬಲಿಸಿ ಕೆಂಪು ಸಮುದ್ರದಲ್ಲಿ ಸಾಗುವ ಸರಕು ನೌಕೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಾಗಿ ಹೌದಿ ಬಂಡುಗೋರರು ಸಮರ್ಥಿಸಿಕೊಂಡಿದ್ದಾರೆ. ಹೌದಿಗಳ ನೆಲೆಯ ಮೇಲಿನ ದಾಳಿಯು ಸಮುದ್ರಯಾನದ ಸ್ವಾತಂತ್ರ್ಯವನ್ನು ಖಚಿತಪಡಿಸುವ ಮತ್ತು ವ್ಯಾಪಾರ ಪ್ರಕ್ರಿಯೆ ಸರಾಗಗೊಳಿಸುವ ಉದ್ದೇಶವನ್ನು ಹೊಂದಿದೆ. ಇವತ್ತು ನನ್ನ ನಿರ್ದೇಶನದಂತೆ ಮತ್ತು ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಬಹ್ರೇನ್, ನೆದರ್ಲ್ಯಾಂಡ್ನ ಬೆಂಬಲದಿಂದ ಹೌದಿ ಬಂಡುಗೋರರು ಯೆಮನ್ನಲ್ಲಿ ಬಳಸುತ್ತಿದ್ದ ಹಲವು ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದ್ದಾರೆ.

ಭಾರೀ ಬೆಲೆ ತೆರಲು ಸಿದ್ಧರಾಗಿ: ಹೌದಿಗಳ ಎಚ್ಚರಿಕೆ

ಅಮೆರಿಕ ಮತ್ತು ಬ್ರಿಟನ್ ಭಾರೀ ಬೆಲೆ ತೆರಬೇಕಾಗುತ್ತದೆ ಮತ್ತು ಎಲ್ಲಾ ಭೀಕರ ಪರಿಣಾಮಗಳನ್ನು ಸಹಿಸಿಕೊಳ್ಳಬೇಕು ಎಂದು ಯೆಮನ್ನಲ್ಲಿ ಹೌದಿ ನೇತೃತ್ವದ ಸರಕಾರದ ಸಹಾಯಕ ವಿದೇಶಾಂಗ ಸಚಿವ ಹುಸೇನ್ ಅಲ್-ಎಝಿ ಎಚ್ಚರಿಕೆ ನೀಡಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.

ಅಮೆರಿಕ, ಬ್ರಿಟನ್ನ ಹಡಗುಗಳು, ಸಬ್ಮೆರಿನ್ಗಳು ಹಾಗೂ ಯುದ್ಧವಿಮಾನಗಳಿಂದ ನಮ್ಮ ದೇಶವು ಭಾರೀ ಆಕ್ರಮಣಕಾರಿ ದಾಳಿಗೆ ಒಳಗಾಯಿತು ಮತ್ತು ಇದಕ್ಕೆ ಅಮೆರಿಕ ಮತ್ತು ಬ್ರಿಟನ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದವರು ಎಚ್ಚರಿಕೆ ನೀಡಿದ್ದಾರೆ.

ಕೆಂಪು ಸಮುದ್ರದಲ್ಲಿ ನಿಯೋಜಿಸಲಾಗಿರುವ ಅಮೆರಿಕ ಮತ್ತು ಬ್ರಿಟನ್ ಸಮರನೌಕೆಗಳ ವಿರುದ್ಧ ಈಗಾಗಲೇ ಪ್ರತಿದಾಳಿ ಆರಂಭವಾಗಿದೆ ಎಂದು ಹಮಾಸ್ನ ಉನ್ನತ ಮೂಲಗಳು ಹೇಳಿವೆ. ಯೆಮನ್ ಮೇಲಿನ ಅಮೆರಿಕ-ಬ್ರಿಟನ್ ದಾಳಿ ಅನಾಗರಿಕ ಎಂದು ಹೌದಿಗಳ ಸರ್ವೋಚ್ಛ ರಾಜಕೀಯ ಸಮಿತಿ ಸದಸ್ಯ ಮುಹಮ್ಮದ್ ಅಲಿ ಅಲ್-ಹೌದಿ ಪ್ರತಿಕ್ರಿಯಿಸಿದ್ದಾರೆ.

ಯೆಮನ್ನ ಹಲವು ನಗರಗಳನ್ನು ಗುರಿಯಾಗಿಸಿ ಅಮೆರಿಕ ಮತ್ತು ಬ್ರಿಟನ್ ನಡೆಸಿದ ದಾಳಿ ಯೆಮನ್ನ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ, ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಇರಾನ್ ಖಂಡಿಸಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News