×
Ad

ಅಮೆರಿಕ | ಎಫ್‌ಬಿಐ ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್ ಪಟೇಲ್ ಆಯ್ಕೆ

Update: 2025-02-21 07:15 IST

PC: x.com/RapidResponse47

ವಾಶಿಂಗ್ಟನ್ : ಅಮೆರಿಕ ಸೆನೆಟ್ ಎಫ್‌ಬಿಐ ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು ಗುರುವಾರ ಆಯ್ಕೆ ಮಾಡಿದೆ. ಅವರ ನಾಮನಿರ್ದೇಶನದ ಪರವಾಗಿ 51 ಮತಗಳು ಬಂದರೆ, ವಿರೋಧವಾಗಿ 49 ಮತಗಳು ಚಲಾವಣೆಯಾದವು.

ಎಫ್ ಬಿ ಐ ನ ಅಧಿಕಾರಿಗಳನ್ನು ಹುದ್ದೆಯಿಂದ ತೆಗೆಯಬೇಕು, ಅಮೆರಿಕದಲ್ಲಿ ನಡೆದ ಜನವರಿ 6, 2021 ರ ಗಲಭೆಯಲ್ಲಿ ಭಾಗಿಯಾಗಿರುವ ಸಾವಿರಾರು ಏಜೆಂಟ್‌ಗಳನ್ನು ಗುರುತಿಸಬೇಕು ಎಂಬ ಕೂಗಿನ ಮಧ್ಯೆ, ಡೊನಾಲ್ಡ್ ಟ್ರಂಪ್ ಅವರಿಗೆ ನಿಷ್ಠಾವಂತರಾಗಿರುವ ಮತ್ತು ಎಫ್ ಬಿ ಐ ನ ತೀವ್ರ ವಿಮರ್ಶಕರಾಗಿರುವ ಪಟೇಲ್ ಅವರ ನೇಮಕಾತಿಯು ಕುತೂಹಲ ಮೂಡಿಸಿದೆ.

ನೇಮಕಾತಿ ದೃಢವಾಗುತ್ತಿದ್ದಂತೆ, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಶ್ ಪಟೇಲ್, “ಎಫ್ ಬಿ ಐ ಮೇಲಿರುವ ವಿಶ್ವಾಸವನ್ನು ಮತ್ತೆ ಪುನರ್ನಿರ್ಮಿಸಲು ಒಳ್ಳೆಯ ಪೊಲೀಸರು ತಮ್ಮ ಕೆಲಸಗಳನ್ನು ಮುಂದುವರಿಸಲಿ. ಅಮೆರಿಕಕ್ಕೆ ಹಾನಿ ಮಾಡುವವರು ಯಾವ ಗ್ರಹದ ಮೂಲೆಯಲ್ಲಿದ್ದರೂ ಅವರನ್ನು ಹುಡುಕಿ ತೆಗೆಯುತ್ತೇವೆ”, ಎಂದು ಎಚ್ಚರಿಕೆ ನೀಡಿದ್ದಾರೆ.

ನ್ಯೂಯಾರ್ಕ್‌ನ ಗಾರ್ಡನ್ ಸಿಟಿಯವರಾದ ಕಾಶ್ ಪಟೇಲ್, ಅವರ ಪೋಷಕರು ಭಾರತದ ಗುಜರಾತ್‌ ಮೂಲದವರು. ಅವರ ಕುಟುಂಬವು 1970 ರ ದಶಕದ ಆರಂಭದಲ್ಲಿ ಜನಾಂಗೀಯ ತಾರತಮ್ಯದಿಂದಾಗಿ ಉಗಾಂಡಾವನ್ನು ತೊರೆದು ಕೆನಡಾದಲ್ಲಿ ನೆಲೆಸಿತ್ತು. ಅವರ ತಂದೆ ವಿಮಾನಯಾನ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿಯಾಗಿ ಹುದ್ದೆಯನ್ನು ಸ್ವೀಕರಿಸಿದ ನಂತರ, ಕುಟುಂಬ ಅಮೆರಿಕಕ್ಕೆ ಸ್ಥಳಾಂತರಗೊಂಡಿತು.

ಕಾಶ್ ಪಟೇಲ್ ಅವರು ರಿಚ್ಮಂಡ್ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಕ್ರಿಮಿನಲ್ ಜಸ್ಟೀಸ್ ನಲ್ಲಿ ಪದವಿ ಪಡೆದಿದ್ದಾರೆ. ಅವರು ಅಮೆರಿಕ ಅಧ್ಯಕ್ಷರ ಉಪ ಸಹಾಯಕರಾಗಿ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ (ಎನ್‌ಎಸ್‌ಸಿ) ಭಯೋತ್ಪಾದನಾ ನಿಗ್ರಹದ ಹಿರಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

"ಅಲ್-ಬಾಗ್ದಾದಿ ಮತ್ತು ಖಾಸೆಮ್ ಅಲ್-ರಿಮಿಯಂತಹ ಐಸಿಸ್ ಮತ್ತು ಅಲ್-ಖೈದಾ ನಾಯಕರನ್ನು ನಿರ್ಮೂಲನೆ ಮಾಡುವುದು ಸೇರಿದಂತೆ ಹಲವಾರು ಅಮೆರಿಕ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವುದು" ಸೇರಿದಂತೆ ಡೊನಾಲ್ಡ್ ಟ್ರಂಪ್ ಅವರ ಹಲವು ಪ್ರಮುಖ ಆದ್ಯತೆಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಕಾಶ್ ಪಟೇಲ್ ಅವರಿಗೆ ನೀಡಲಾಗಿತ್ತು ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News