ಜೆಫ್ರಿ ಎಪ್ಸ್ಟೀನ್ ಜೊತೆ ಸಂಬಂಧದ ಆರೋಪ : "ಪ್ರಿನ್ಸ್" ಪಟ್ಟ ಕಸಿದು ಸಹೋದರ ಆಂಡ್ರ್ಯೂ ಅವರನ್ನು ರಾಜಮನೆತನದಿಂದ ಹೊರ ಹಾಕಿದ ಬ್ರಿಟನ್ ರಾಜ ಚಾರ್ಲ್ಸ್
Photo | BBC
ಲಂಡನ್ : ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಸಂಬಂಧದ ಹಿನ್ನೆಲೆ ಪ್ರಿನ್ಸ್ ಆಂಡ್ರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತೀವ್ರ ಒತ್ತಡ ಕೇಳಿಬಂದ ನಂತರ ಬ್ರಿಟನ್‌ನ ರಾಜ ಚಾರ್ಲ್ಸ್ ಅವರು ಸಹೋದರ ಆಂಡ್ರ್ಯೂ ಅವರಿಂದ ರಾಜಮನೆತನದ ಬಿರುದುಗಳನ್ನು ಕಸಿದುಕೊಂಡು ವಿಂಡ್ಸರ್‌ನಲ್ಲಿರುವ ರಾಜಮನೆತನದ ಎಸ್ಟೇಟ್‌ನಿಂದ ಅವರನ್ನು ಹೊರಹಾಕುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಜೆಫ್ರಿ ಎಪ್ಸ್ಟೀನ್ ಅವರ ನಡುವಿನ ಸಂಬಂಧದ ಕುರಿತು ಆಂಡ್ರೂ ಅವರು ಕಳೆದ 15 ವರ್ಷಗಳಿಂದ ವಿವಾದ ಎದುರಿಸುತ್ತಿದ್ದರು. ಇತ್ತೀಚೆಗೆ ವರ್ಜೀನಿಯಾ ರಾಬರ್ಟ್ಸ್ ಗಿಯುಫ್ರೆ ಅವರ ಪುಸ್ತಕದಲ್ಲೂ ಆಂಡ್ರ್ಯೂ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಬಗ್ಗೆ ಉಲ್ಲೇಖಿಸಲಾಗಿತ್ತು.
ಆದರೆ ಪ್ರಿನ್ಸ್ ಆಂಡ್ರೂ ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಆದರೆ ರಾಜಮನೆತನ ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಆಂಡ್ರೂ ವಿರುದ್ಧ ಕಿಂಗ್ ಚಾರ್ಲ್ಸ್ 111 ಈ ಕ್ರಮ ಕೈಗೊಂಡಿದ್ದಾರೆ.
ಬಕಿಂಗ್‌ಹಾಮ್ ಪ್ಯಾಲೆಸ್ ಗುರುವಾರ ರಾತ್ರಿ ಪ್ರಕಟಿಸಿದ ಹೇಳಿಕೆಯಲ್ಲಿ, ಇನ್ನು ಮುಂದೆ ಅವರನ್ನು ಆಂಡ್ರೂ ಮೌಂಟ್ಬ್ಯಾಟನ್ ವಿಂಡ್ಸರ್ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದೆ.
ತಮ್ಮ ಖಾಸಗಿ ಜೀವನದ ಕುರಿತು ಮತ್ತೆ ಪ್ರಶ್ನೆಗಳು ಏಳುತ್ತಿದ್ದಂತೆಯೇ ಪ್ರಿನ್ಸ್ ಆಂಡ್ರೂ ಈ ತಿಂಗಳ ಆರಂಭದಲ್ಲೇ ಡ್ಯೂಕ್ ಆಫ್ ಯಾರ್ಕ್ ಸೇರಿದಂತೆ ಇತರ ರಾಜ ಬಿರುದುಗಳನ್ನೂ ತ್ಯಜಿಸಿದ್ದರು.
ಕಿಂಗ್ ಚಾರ್ಲ್ಸ್ 111 ಅವರು ಆಂಡ್ರೂ ಅವರಿಂದ ಬಿರುದು, ಗೌರವಗಳು ಮತ್ತು ಹುದ್ದೆಗಳನ್ನು ಅಧಿಕೃತವಾಗಿ ಕಸಿದುಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.