ಅಂಕಿತಾ ಭಂಡಾರಿ ಹತ್ಯೆ ಪ್ರಕರಣ | ʼVIPʼ ಆಯಾಮ ತಳ್ಳಿ ಹಾಕಿದ ಪೊಲೀಸರು; ಸಿಬಿಐ ತನಿಖೆಗೆ ವಿಪಕ್ಷಗಳಿಂದ ಪ್ರತಿಭಟನೆ
Photo credit: ANI Video Grab
ಡೆಹ್ರಾಡೂನ್, ಜ.4: ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ಯಾವುದೇ ವಿಐಪಿ ವ್ಯಕ್ತಿಗಳು ಭಾಗಿಯಾಗಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ ಬೆನ್ನಿಗೇ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಉತ್ತರಾಖಂಡದ ವಿಪಕ್ಷಗಳು ರವಿವಾರ ಪ್ರತಿಭಟನೆ ನಡೆಸಿದವು.
ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಭಾವಿ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ ಕಾಂಗ್ರೆಸ್, ಉತ್ತರಾಖಂಡ ಕ್ರಾಂತಿ ದಳ್, ಮಹಿಳಾ ಮಂಚ್, ಎಡಪಕ್ಷಗಳು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳು ಡೆಹ್ರಾಡೂನ್‌ನ ಪೆರೇಡ್ ಮೈದಾನದಲ್ಲಿ ಜಮಾಯಿಸಿ, ಮುಖ್ಯಮಂತ್ರಿ ನಿವಾಸದತ್ತ ಪಾದಯಾತ್ರೆ ನಡೆಸಿದವು.
ಪ್ರತಿಭಟನಾಕಾರರು ‘ಅಂಕಿತಾಗೆ ನ್ಯಾಯ ನೀಡಿ’, ‘ಇನ್ನಷ್ಟು ವಿಳಂಬ ಬೇಡ’, ‘ಮುಖ್ಯಮಂತ್ರಿಗೆ ಘೇರಾವ್ ಮಾಡಿ’ ಹಾಗೂ ‘ನಿಜವಾದ ಅಪರಾಧಿ ಯಾರು?’ ಎಂಬ ಘೋಷಣೆಗಳಿರುವ ಬಿತ್ತಿ ಫಲಕಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತಮ್ಮ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಅವರು ಹೇಳಿದರು.
ಪೌರಿ ಜಿಲ್ಲೆಯ ಯಮಕೇಶ್ವರ್‌ನ ವನತಾರಾ ರೆಸಾರ್ಟ್‌ನಲ್ಲಿ ರಿಸಿಪ್ಷನಿಸ್ಟ್ ಆಗಿದ್ದ 19 ವರ್ಷದ ಅಂಕಿತಾ ಭಂಡಾರಿಯನ್ನು 2022ರ ಸೆಪ್ಟೆಂಬರ್ 18ರಂದು ಹತ್ಯೆ ಮಾಡಲಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ರಾಜ್ಯದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಬಳಿಕ ರಾಜ್ಯ ಸರ್ಕಾರ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (SIT) ವಹಿಸಿತ್ತು.