ಪಾಕಿಸ್ತಾನಕ್ಕಾಗಿ ಅಂಬಾಲಾ ವಾಯುಪಡೆ ನೆಲೆಯ ಬೇಹುಗಾರಿಕೆ ನಡೆಸುತ್ತಿದ್ದ ಆರೋಪಿ ಸುನಿಲ್ ಕುಮಾರ್ ಸೆರೆ
Photo Credit : ANI
ಅಂಬಾಲಾ (ಹರ್ಯಾಣ), ಜ. 6: ಅಂಬಾಲಾ ವಾಯುಪಡೆ ನೆಲೆಯ ಬೇಹುಗಾರಿಕೆಯನ್ನು ನಡೆಸುತ್ತಿದ್ದ ಮತ್ತು ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುತ್ತಿದ್ದ ಆರೋಪಿಯನ್ನು ಹರ್ಯಾಣ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಅಂಬಾಲಾದ ಸಹಾ ಪ್ರದೇಶದ ಸಬ್ಕಾ ಗ್ರಾಮದ ನಿವಾಸಿ ಸುನಿಲ್ ಕುಮಾರ್ ಕಳೆದ ಏಳು ತಿಂಗಳುಗಳಿಂದ ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ವೇದಿಕೆಯೊಂದರಲ್ಲಿ ಮಹಿಳೆಯೊಬ್ಬಳೊಂದಿಗೆ ಸಂಪರ್ಕದಲ್ಲಿದ್ದ. ವಾಯುಪಡೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆದಾರನೊಬ್ಬನ ಸಂಪರ್ಕದಿಂದ ಆತ ಆಗಾಗ್ಗೆ ಅಲ್ಲಿಗೆ ಭೇಟಿ ನೀಡುತ್ತಿದ್ದ. ತನ್ನ ಲೊಕೇಶನ್, ಚಿತ್ರಗಳು ಮತ್ತು ವೀಡಿಯೊಗಳನ್ನು ಮೊಬೈಲ್ ಆ್ಯಪ್ ಮೂಲಕ ಪಾಕಿಸ್ತಾನಿ ಮಹಿಳೆಯೊಂದಿಗೆ ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕುಮಾರ್ ಆಗಾಗ್ಗೆ ಮಹಿಳೆಯೊಂದಿಗೆ ಚಾಟ್ ಮಾಡುತ್ತಿದ್ದು, ಆತ ಹನಿಟ್ರ್ಯಾಪ್‌ನಲ್ಲಿ ಸಿಲುಕಿರುವ ಶಂಕೆಯಿದೆ ಎಂದು ಹೇಳಿದರು.
ಆರೋಪಿಯು ವಾಯುಪಡೆ ನಿಲ್ದಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದುದನ್ನು ಪ್ರಾಥಮಿಕ ತನಿಖೆ ಬಹಿರಂಗಗೊಳಿಸಿದೆ. ಸ್ಥಳೀಯ ನ್ಯಾಯಾಲಯವು ಆತನಿಗೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ ಎಂದು ಅಂಬಾಲಾ ಕ್ರೈಂ ಡಿಎಸ್‌ಪಿ ವೀರೇಂದ್ರ ಕುಮಾರ್ ತಿಳಿಸಿದ್ದಾರೆ.
ಆರೋಪಿಯ ಮೊಬೈಲ್ ಫೋನ್‌ನಿಂದ ಅಳಿಸಲಾದ ದತ್ತಾಂಶವನ್ನು ಮರಳಿ ಪಡೆಯಲಾಗುತ್ತಿದ್ದು, ಅಪರಾಧದಲ್ಲಿ ಇತರರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.