Venezuelaದಲ್ಲಿ ಆದ ಹಾಗೆ ಟ್ರಂಪ್ ಮೋದಿಯವರನ್ನು ಅಪಹರಿಸಲಿದ್ದಾರೆಯೇ?: ಪೃಥ್ವಿರಾಜ್ ಚವಾಣ್ ವಿಲಕ್ಷಣ ಪ್ರಶ್ನೆ
ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ
Photo Credit : PTI
ಮುಂಬೈ, ಜ.6: ವೆನೆಝುವೆಲಾದಲ್ಲಿ ನಡೆದಂತೆ ಪ್ರಧಾನಿ ಮೋದಿಯವರನ್ನು ಟ್ರಂಪ್ ಅಪಹರಿಸಲಿದ್ದಾರೆಯೇ ಎಂಬ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಅವರ ವಿಲಕ್ಷಣ ಪ್ರಶ್ನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಚವಾಣ್ ವಿರುದ್ಧ ದೂಷಣೆ, ಟೀಕೆಗಳ ಸುರಿಮಳೆಯಾಗುತ್ತಿದ್ದು, ಜೋಕ್‌ಗಳು ಕೂಡ ಹರಿದಾಡುತ್ತಿವೆ.
ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪೃಥ್ವಿರಾಜ್ ಚವಾಣ್ ಅವರು ವೆನೆಝುವೆಲಾದಲ್ಲಿ ಅಮೆರಿಕ ನಡೆಸಿದ ರಾತ್ರಿ ಮಿಲಿಟರಿ ಕಾರ್ಯಾಚರಣೆಯನ್ನು ಉಲ್ಲೇಖಿಸುತ್ತಾ, “ವೆನೆಝುವೆಲಾದಲ್ಲಿ ನಡೆದಿರುವುದು ಭಾರತದಲ್ಲೂ ಸಂಭವಿಸಲಿದೆಯೇ? ನಮ್ಮ ಪ್ರಧಾನಿಯವರನ್ನು ಮಿಸ್ಟರ್ ಟ್ರಂಪ್ ಅಪಹರಿಸಲಿದ್ದಾರೆಯೇ?” ಎಂದು ಪ್ರಶ್ನಿಸಿದ್ದರು.
ಚವಾಣ್ ಅವರ ಈ ಅಸಂಬದ್ಧ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜೊತೆಗೆ ಜೋಕ್‌ಗಳ ಮಹಾಪೂರವೇ ಹರಿದುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಚವಾಣ್ ಅವರ ಅನಿಸಿಕೆಗಳಿಗೆ ‘ಬ್ರೈನ್ ಡೆಡ್’ (ಸತ್ತ ಮೆದುಳು), ಅನಕ್ಷರಸ್ಥ, ಮೂರ್ಖ ಇತ್ಯಾದಿ ಪದಗಳನ್ನು ಬಳಸಿಕೊಂಡು ಪ್ರತಿಕ್ರಿಯಿಸಿದ್ದಾರೆ.
ಭಾರತ ಅಣ್ವಸ್ತ್ರ ಶಕ್ತ ರಾಷ್ಟ್ರವಾಗಿರುವುದನ್ನು ನೆಟ್ಟಿಗರು ನೆನಪಿಸಿದ್ದು, ಚವಾಣ್ ಅವರ ಹೇಳಿಕೆ ಸಂಪೂರ್ಣ ಅಸಂಬದ್ಧವಾಗಿದೆ ಎಂದು ಹೇಳಿದ್ದಾರೆ.
“ಭಾರತಕ್ಕೆ ಶೇ.50ರಷ್ಟು ಸುಂಕ ವಿಧಿಸಿರುವುದರಿಂದ ಅಮೆರಿಕದ ಜೊತೆ ವ್ಯಾಪಾರ ಅಸಾಧ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಭಾರತದಿಂದ ಅಮೆರಿಕಕ್ಕೆ ನಡೆಯುವ ರಫ್ತಿಗೆ ತಡೆ ಉಂಟಾಗಿದೆ. ಉಭಯ ದೇಶಗಳ ನಡುವಿನ ವ್ಯಾಪಾರವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲದಿರುವುದರಿಂದ ಅಮೆರಿಕವು ಸುಂಕಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ಭಾರತ ಇದನ್ನು ಸಹಿಸಿಕೊಳ್ಳಬೇಕಾಗಿದೆ,” ಎಂದು ಚವಾಣ್ ಹೇಳಿದ್ದಾರೆ.
“ನಮ್ಮ ಜನರು ಈ ಹಿಂದೆ ಅಮೆರಿಕಕ್ಕೆ ರಫ್ತು ಮಾಡಿ ಹಣ ಸಂಪಾದಿಸುತ್ತಿದ್ದರು. ಅದು ಇನ್ನು ಮುಂದೆ ಲಭ್ಯವಿರುವುದಿಲ್ಲ. ನಾವು ಪರ್ಯಾಯ ಮಾರುಕಟ್ಟೆಗಳ ಕಡೆಗೆ ದೃಷ್ಟಿ ಹಾಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನಗಳು ನಡೆಯಬೇಕು,” ಎಂದವರು ಹೇಳಿದ್ದಾರೆ.
ಒಂದು ವೇಳೆ ಟ್ರಂಪ್ ವೆನೆಝುವೆಲಾದಲ್ಲಿ ಮಾಡಿದದ್ದನ್ನೇ ಭಾರತದಲ್ಲೂ ಮಾಡಿದರೆ ಏನಾಗಬಹುದು ಎಂದು ಚವಾಣ್ ಪ್ರಶ್ನಿಸಿದ್ದಾರೆ.
►ಚವಾಣ್ ಹೇಳಿಕೆಯಿಂದ ಇಡೀ ದೇಶಕ್ಕೆ ಅಪಮಾನ: ಜಮ್ಮು–ಕಾಶ್ಮೀರದ ಮಾಜಿ ಪೊಲೀಸ್ ವರಿಷ್ಠ ವೈದ್ ಕಿಡಿ
ಜಮ್ಮು–ಕಾಶ್ಮೀರದ ಮಾಜಿ ಪೊಲೀಸ್ ವರಿಷ್ಠ ವೈದ್ ಅವರು ಪೃಥ್ವಿರಾಜ್ ಚವಾಣ್ ಅವರನ್ನು ತೀವ್ರವಾಗಿ ಖಂಡಿಸಿದ್ದಾರೆ. ಚವಾಣ್ ಅವರ ಹೇಳಿಕೆ ಇಡೀ ದೇಶವನ್ನೇ ಅಪಮಾನಿಸಿದಂತಾಗಿದೆ ಎಂದು ವೈದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಟ್ರಂಪ್ ಅವರು ವೆನೆಝುವೆಲಾ ಹಾಗೂ ಮಡುರೋಗೆ ಏನು ಮಾಡಿದ್ದಾರೋ, ಅದೇ ಪರಿಸ್ಥಿತಿ ನರೇಂದ್ರ ಮೋದಿಯವರಿಗೂ ಆಗಬೇಕು ಎಂದು ಯೋಚಿಸುವುದೇ ಇಡೀ ದೇಶಕ್ಕೆ ಅಪಮಾನಕಾರಿ. ಪೃಥ್ವಿರಾಜ್ ಚವಾಣ್ ಅವರು ಕನಿಷ್ಠ ಮಾತನಾಡುವ ಮುನ್ನ ಯೋಚಿಸಬೇಕು. ಕಾಂಗ್ರೆಸ್ ಪಕ್ಷದ ನೈಜ ಸಿದ್ಧಾಂತ ಇದೇನಾ?” ಎಂದು ಅವರು ಪ್ರಶ್ನಿಸಿದ್ದಾರೆ.
ಟ್ರಂಪ್ ಹೇಳಿಕೆಗೆ ಸಂಬಂಧಿಸಿ ಖರ್ಗೆ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಮರುದಿನವೇ ಚವಾಣ್ ಈ ರೀತಿಯಾಗಿ ಪ್ರತಿಕ್ರಿಯಿಸಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
► ಬಿಜೆಪಿ ಖಂಡನೆ
ಬಿಜೆಪಿ ನಾಯಕ ಪ್ರದೀಪ್ ಭಂಡಾರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನೀಡಿದ ಹೇಳಿಕೆಯಲ್ಲಿ ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿಯಾಗಿದ್ದ ಪೃಥ್ವಿರಾಜ್ ಚವಾಣ್ ಅವರನ್ನು ಖಂಡಿಸಿದ್ದಾರೆ.
“ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಅವರು ನಿರ್ಲಜ್ಜವಾಗಿ ಭಾರತದ ಸನ್ನಿವೇಶವನ್ನು ವೆನೆಝುವೆಲಾದೊಂದಿಗೆ ಹೋಲಿಸಿದ್ದಾರೆ. ವೆನೆಝುವೆಲಾದಲ್ಲಿ ನಡೆದಿರುವುದು ಭಾರತದಲ್ಲೂ ಆಗಬಹುದೇ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಭಾರತ ವಿರೋಧಿ ಮನಸ್ಥಿತಿಯನ್ನು ಸ್ಪಷ್ಟಪಡಿಸಿದೆ,” ಎಂದು ಹೇಳಿದ್ದಾರೆ.