×
Ad

ನವಾಲ್ನಿ ಶ್ರದ್ಧಾಂಜಲಿ ಸಭೆಗಳಲ್ಲಿ ಪಾಲ್ಗೊಂಡ 100ಕ್ಕೂ ಅಧಿಕ ಮಂದಿಯ ಬಂಧನ

Update: 2024-02-17 21:51 IST

ನವಾಲ್ನಿ | Photo: hindustantimes.com

ಮಾಸ್ಕೊ: ಬಂಧನದಲ್ಲಿ ಮೃತಪಟ್ಟ ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಅವರ ಶ್ರದ್ಧಾಂಜಲಿ ಸಭೆಗಳಲ್ಲಿ ಪಾಲ್ಗೊಂಡ 100ಕ್ಕೂ ಅಧಿಕ ಮಂದಿಯನ್ನು ರಶ್ಯನ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಂದು ಮಾನವಹಕ್ಕು ಸಂಘಟನೆಯೊಂದು ಶನಿವಾರ ತಿಳಿಸಿದೆ.

ಪುಟಿನ್ ಆಡಳಿತದ ಕಟ್ಟಾ ವಿರೋಧಿಯಾದ 47 ವರ್ಷ ವಯಸ್ಸಿನ ನವಾಲ್ನಿ ಅವರು ಆರ್ಕ್ ಟಿಕ್ನಲ್ಲಿ 19 ವರ್ಷದ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. ಅವರ ನಿಧನದ ವಾರ್ತೆಯನ್ನು ರಶ್ಯದ ಅಧಿಕಾರಿಗಳು ಶುಕ್ರವಾರ ಪ್ರಕಟಿಸಿದ್ದರು.

ನವಾಲ್ನಿ ಅವರ ಗೌರವಾರ್ಥ ರಶ್ಯದ ವಿವಿಧೆಡೆ ಶುಕ್ರವಾರ ರಾತ್ರಿ ಶ್ರದ್ದಾಂಜಲಿ ಸಭೆಗಳು ನಡೆದಿದ್ದವು, ತಾತ್ಕಾಲಿಕವಾಗಿ ನಿರ್ಮಿಸಲಾದ ಸ್ಮಾರಕಗಳ ಮುಂದೆ ಪುಷ್ಪಗುಚ್ಚಗಳನ್ನಿರಿಸಿ ನವಾಲ್ನಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ರಶ್ಯದ ಎರಡನೆ ಅತಿ ದೊಡ್ಡ ನಗರವಾದ ಸೈಂಟ್ ಪೀಟರ್ಸ್ಬರ್ಗ್ನಲ್ಲಿ 64 ಮಂದಿ ಸೇರಿದಂತೆ 10 ನಗರಗಳಲ್ಲಿ ಶುಕ್ರವಾರ ನಡೆದ ನವಾಲ್ನಿ ಅವರ ಶ್ರದ್ಧಾಂಜಲಿ ಸಭೆಗಳಲ್ಲಿ ಪಾಲ್ಗೊಂಡ 101ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆಯೆಂದು ಓವಿಡಿ- ಇನ್ಫೋ ಮಾನವಹಕ್ಕುಗಳ ವೇದಿಕೆ ವರದಿ ಮಾಡಿದೆ.

ರಾಜಧಾನಿ ಮಾಸ್ಕೊದಲ್ಲಿ 11 ಮಂದಿಯನ್ನು ಬಂಧಿಸಲಾಗಿದೆ. ನಿಝ್ನಿ ನೊವ್ಗೊರೊಡ್, ಕ್ರಾಸ್ನೊಡರ್, ರೊಸ್ತೊವ್-ಅನ್-ಡೊನ್ ಹಾಗೂ ಟ್ವೆರ್ ಸೇರಿದಂತೆ ವಿವಿಧ ನಗರಗಳಿಂದ ಹಲವಾರು ಮಂದಿಯನ್ನು ಬಂಧಿಸಲಾಗಿದೆಯೆಂದು ವರದಿ ತಿಳಿಸಿದೆ.

ರಶ್ಯದಲ್ಲಿ ಪ್ರತಿಭಟನೆಗಳನ್ನು ನಡೆಸುವುದು ಕಟ್ಟುನಿಟ್ಟಿನ ಬಂಡಾಯ ವಿರೋಧಿ ಕಾಯ್ದೆಯಡಿ ಕಾನೂನುಬಾಹಿರ ಅಪರಾಧವೆನಿಸಿಕೊಳ್ಳುತ್ತದೆ. ನವಾಲ್ನಿ ಬೆಂಬಲವಾಗಿ ರ‍್ಯಾಲಿಗಳನ್ನು ನಡೆಸುವವರ ವಿರುದ್ಧ ಅಧಿಕಾರಿಗಳು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಮಾಸ್ಕೊದ ಹೃದಯಭಾಗದಲ್ಲಿ ಬೃಹತ್ ರ‍್ಯಾಲಿಯನ್ನು ನಡೆಸುವಂತೆ ಆನ್ಲೈನ್ ಮೂಲಕ ಕರೆ ನೀಡಿರುವುದು ತಮ್ಮ ಗಮನಕ್ಕೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಇಂತಹ ಸಮಾವೇಶಗಳಲ್ಲಿ ಭಾಗವಹಿಸದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News