ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರ: ಉಕ್ರೇನ್ ನಲ್ಲಿ 22 ಮಂದಿಯ ಬಂಧನ
ಸಾಂದರ್ಭಿಕ ಚಿತ್ರ
ಕೀವ್: ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರದ ವಿರುದ್ಧ ರಾಷ್ಟ್ರವ್ಯಾಪಿ ಕಾರ್ಯಾಚರಣೆ ನಡೆಸಿರುವ ಉಕ್ರೇನ್ ಅಧಿಕಾರಿಗಳು 22ಕ್ಕೂ ಅಧಿಕ ಮಂದಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.
2022ರ ಆರಂಭದಲ್ಲಿ ರಶ್ಯದ ಆಕ್ರಮಣದ ಬಳಿಕ ಯುದ್ಧದಿಂದ ಜರ್ಝರಿತಗೊಂಡ ಉಕ್ರೇನ್ ನಲ್ಲಿ ಲಘು ಶಸ್ತ್ರಾಸ್ತ್ರಗಳ ಪ್ರಸರಣ ಮತ್ತು ಕಳ್ಳಸಾಗಣೆ ಹೆಚ್ಚಿರುವ ಬಗ್ಗೆ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳೂ ಕಳವಳ ವ್ಯಕ್ತಪಡಿಸಿದ್ದವು. ಉಕ್ರೇನ್ ಮಿಲಿಟರಿಗೆ ಸರಬರಾಜು ಆಗುತ್ತಿರುವ ಪಾಶ್ಚಿಮಾತ್ಯ ಶಸ್ತ್ರಾಸ್ತ್ರಗಳು `ಬ್ಲ್ಯಾಕ್ ಮಾರ್ಕೆಟ್' ಮೂಲಕ ಕ್ರಿಮಿನಲ್ ಗುಂಪುಗಳು ಅಥವಾ ಭಯೋತ್ಪಾದಕ ಸಂಘಟನೆಗಳ ಕೈ ಸೇರುತ್ತಿವೆ ಎಂದು ರಶ್ಯ ಅಧಿಕಾರಿಗಳು ನಿರಂತರ ಆರೋಪಿಸಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರದ ವಿರುದ್ಧದ ರಾಷ್ಟ್ರವ್ಯಾಪಿ ಕಾರ್ಯಾಚರಣೆಯ ಅಂಗವಾಗಿ ಸುಮಾರು 700 ದಾಳಿಗಳನ್ನು ನಡೆಸಿದ್ದು 22 ಮಂದಿಯನ್ನು ಬಂಧಿಸಲಾಗಿದೆ. ಅಕ್ರಮ ಶಸ್ತ್ರಾಸ್ತ್ರ ದಾಸ್ತಾನು ಹಾಗೂ ಕಳ್ಳಸಾಗಣೆ ಪ್ರಕರಣಗಳಲ್ಲಿ ಒಳಗೊಂಡಿರುವ 38 ಮಂದಿಯ ಬಗ್ಗೆ ಮಾಹಿತಿ ಲಭಿಸಿದ್ದು ಕಾರ್ಯಾಚರಣೆ ಮುಂದುವರಿದಿದೆ. ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ತೊಡಗಿರುವುದು ಸಾಬೀತಾದರೆ 7 ವರ್ಷದವರೆಗೆ ಜೈಲುಶಿಕ್ಷೆಗೆ ಅವಕಾಶವಿದೆ ಎಂದು ಉಕ್ರೇನ್ ನ ಪೊಲೀಸ್ ಇಲಾಖೆ ಹೇಳಿದೆ.