ಲೆಬನಾನ್ | ಇಸ್ರೇಲ್ ದಾಳಿಗೆ ಬಲಿಯಾದವರ ಸಂಖ್ಯೆ 558ಕ್ಕೇರಿಕೆ
PC: x.com/HarunMaruf
ಬೈರೂತ್ : ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ಭೀಕರ ವಾಯುದಾಳಿಯಲ್ಲಿ 50 ಮಂದಿ ಮಕ್ಕಳು ಹಾಗೂ 94 ಮಹಿಳೆಯರು ಸೇರಿದಂತೆ ಕನಿಷ್ಠ 558 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 1835 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವ ಫಿರಾಸ್ಸ್ ಅಬಿಯಾದ್ ತಿಳಿಸಿದ್ದಾರೆ.
ಇಸ್ರೇಲ್‌ನ ಆಕ್ರಮಣಕ್ಕೆ ಪ್ರತಿದಾಳಿ ನಡೆಸುತ್ತಿರುವ ಹಿಜ್ಬುಲ್ಲಾ ಹೋರಾಟಗಾರರು ಇಸ್ರೇಲ್ ಕಡೆಗೆ ಸಾಲು ಸಾಲು ಕ್ಷಿಪಣಿಗಳ ಸುರಿಮಳೆಗೈದಿದ್ದಾರೆ. ಈ ಮಧ್ಯೆ ಲೆಬನಾನ್‌ನಲ್ಲಿ ಸಂಘರ್ಷವನ್ನು ತಕ್ಷಣವೇ ನಿಲ್ಲಿಸುವಂತೆ ವಿಶ್ವಸಂಸ್ಥೆ ಕರೆ ನೀಡಿದೆ.
ಇಸ್ರೇಲ್‌ನ ಭೀಕರ ದಾಳಿಯಿಂದ ತತ್ತರಿಸಿರುವ ದಕ್ಷಿಣ ಲೆಬನಾನ್‌ನಲ್ಲಿ ಸಾವಿರಾರು ನಾಗರಿಕರು ಜೀವವುಳಿಸಿಕೊಳ್ಳಲು ಮನೆ, ಸೊತ್ತುಗಳನ್ನು ತೊರೆದು ಪಲಾಯನಗೈದಿದ್ದಾರೆ. ಕಳೆದ 24 ತಾಸುಗಳಲ್ಲಿ ಇಸ್ರೇಲ್ ದಾಳಿಯಿಂದ ಪೀಡಿತವಾದ ಲೆಬನಾನ್ ಪ್ರದೇಶಗಳಿಂದ ಪರಾರಿಯಾದ ನಾಗರಿಕರ ಸಂಖ್ಯೆ 16,500ಕ್ಕೇರಿದೆ.
ಈ ನಡುವೆ ಇಸ್ರೇಲ್ ಮಂಗಳವಾರ ಹೇಳಿಕೆಯೊಂದನ್ನು ನೀಡಿ, ಲೆಬನಾನ್‌ನ ಒಳನಾಡು ಪ್ರದೇಶಗಳಲ್ಲಿ ಹಿಜ್ಬುಲ್ಲಾ ನೆಲೆಗಳ ಮೇಲೆ ತಾನು ನಡೆಸುತ್ತಿರುವ ಎರಡನೆ ಹಂತದ ದಾಳಿಗಳನ್ನು ತಾನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ.
‘‘ಸ್ವಲ್ಪ ಸಮಯಕ್ಕೆ ಮುನ್ನ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್)ಯ ನಿರ್ದೇಶನದೊಂದಿಗೆ ಇಸ್ರೇಲ್ ವಾಯುಪಡೆಯು ಬೆಖಾ ಹಾಗೂ ದಕ್ಷಿಣ ಲೆಬನಾನ್‌ನನಲ್ಲಿ ಹಿಜ್ಬುಲ್ಲಾಗೆ ಸೇರಿದ ಹಲವಾರು ನೆಲೆಗಳನ್ನು ಗುರಿಯಿರಿಸಿ ದಾಳಿಗಳನ್ನು ನಡೆಸಿರುವುದಾಗಿ ಐಡಿಎಫ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಹಿಜ್ಬುಲ್ಲಾ ಉಗ್ರರು ದಾಸ್ತಾನು ಮಾಡಿದ್ದ ಶಸ್ತ್ರಾಸ್ತ್ರಗಳಿರುವ ಕಟ್ಟಡಗಳು, ಕಮಾಂಡ್‌ಸೆಂಟರ್‌ಗಳು ಹಾಗೂ ಉಗ್ರರ ಮೂಲಸೌಕರ್ಯಗಳಿರುವ ಸ್ಥಳಗಳನ್ನು ಧ್ವಂಸಗೊಳಿಸಿರುವುದಾಗಿ ಅದು ಹೇಳಿದೆ.
ಇಸ್ರೇಲ್ ಲೆಬನಾನ್ ಮೇಲೆ ಸೋಮವಾರ ನಡೆಸಿದ ಆಕ್ರಮಣವು, ಗಾಝಾ ದಾಳಿಯ ಆನಂತರ ಅದು ನಡೆಸಿದ ಅತಿ ದೊಡ್ಡ ದಾಳಿಯಾಗಿದೆ. ಸೋಮವಾರ ಒಂದೇ ದಿನದಲ್ಲಿ 500ಕ್ಕೂ ಅಧಿಕ ಮಂದಿ ಲೆಬನಾನ್‌ನಾಗರಿಕರು ಇಸ್ರೇಲ್‌ನ ವಾಯುದಾಳಿಗೆ ಬಲಿಯಾಗಿದ್ದಾರೆ.
ತಾನು ಬಾಂಬ್‌ದಾಳಿಯನ್ನು ತೀವ್ರಗೊಳಿಸಿರುವ ಬೆಖಾ ಕಣಿವೆಯಿಂದ ತಕ್ಷಣವೇ ತೆರವುಗೊಳ್ಳುವಂತೆ ಅಲ್ಲಿನ ನಾಗರಿಕರಿಗೆ ಇಸ್ರೇಲ್ ಎಚ್ಚರಿಕೆ ನೀಡಿದೆ.ಹಿಜ್ಬುಲ್ಲಾ ಹೋರಾಟಗಾರರು ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಲು ಬಳಸುತ್ತಿದ್ದ ಕಟ್ಟಡಗಳ ಒಳಗಡೆ ಅಥವಾ ಪಕ್ಕದಲ್ಲಿ ನಾಗರಿಕರು ವಾಸವಾಗಿದ್ದಲ್ಲಿ ತಕ್ಷಣವೇ ಗ್ರಾಮವನ್ನು ತೊರೆದು ಹೋಗುವಂತೆ ಆದೇಶಿಸಿದೆ.
ಹಿಜ್ಬುಲ್ಲಾ ಹೋರಾಟಗಾರರು ಸೋಮವಾರ ರಾತ್ರಿಯಿಂದ ತನ್ನ ಭೂಪ್ರದೇಶದೆಡೆಗೆ ರಾಕೆಟ್‌ಗಳು 100ಕ್ಕೂ ಅಧಿಕ ಪ್ರಾಜೆಕ್ಟೈಲ್ ಕ್ಷಿಪಣಿಗಳನ್ನು ಉಡಾಯಿಸಿರುವುದಾಗಿ ಇಸ್ರೇಲ್ ಹೇಳಿದೆ. ಬಹುತೇಕ ರಾಕೆಟ್‌ಗಳನ್ನು ಉತ್ತರ ಇಸ್ರೇಲ್‌ನ ಲೋವರ್ ಗಲಿಲೀ ಹಾಗೂ ಹಾಮಾಕಿನ್ ಪ್ರದೇಶಗಳ ಮೇಲೆ ಗುರಿಯಿರಿಸಲಾಗಿತ್ತು ಎಂದು ಅದು ಹೇಳಿದೆ.
ಹಿಜ್ಬುಲ್ಲಾ ಹೋರಾಟಗಾರರು ಉಡಾಯಿಸಿದ್ದ ಬಹುತೇಕ ಪ್ರಾಜೆಕ್ಟೈಲ್‌ಗಳು ಹಾಗೂ ರಾಕೆಟ್‌ಗಳನ್ನು ತಡೆದು ನಾಶಪಡಿಸಲಾಗಿದೆಯಾದರೂ, ಆ ಪ್ರದೇಶಗಲ್ಲಿರುವ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಐಡಿಎಫ್ ತಿಳಿಸಿದೆ.