×
Ad

ಸ್ವೀಡನ್ | ಗುಂಪಿನ ಮೇಲೆ ನುಗ್ಗಿದ ಬಸ್ಸು: ಕನಿಷ್ಠ ಆರು ಮಂದಿ ಮೃತ್ಯು

Update: 2025-11-15 07:14 IST

PC | X

ಸ್ಟಾಕ್‍ಹೋಂ: ಸ್ವೀಡನ್ ರಾಜಧಾನಿಯ ಕೇಂದ್ರ ಸ್ಟಾಕ್‍ಹೋಂ ಪ್ರದೇಶದಲ್ಲಿ ಶುಕ್ರವಾರ ಸಂಜೆ ಬಸ್ಸೊಂದು ಜನರ ಗುಂಪಿನ ಮೇಲೆ ಹರಿದು ಸಂಭವಿಸಿದ ದುರಂತದಲ್ಲಿ ಕನಿಷ್ಠ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ.

"ಈ ಘಟನೆಯಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ" ಎಂದು ಸ್ಟಾಕ್‍ಹೋಂ ಪರಿಹಾರ ಸೇವೆಗಳ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ. ಆದರೆ ಗಾಯಗೊಂಡವರ ಮಾಹಿತಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ಆದರೆ ಸಂಜೆಯ ವಾಹನದಟ್ಟಣೆ ಅವಧಿಯಲ್ಲಿ ಸಂಭವಿಸಿದ ಈ ದುರಂತ ಗಂಭೀರ ಘಟನೆಯಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಎಎಫ್‍ಪಿ ವರದಿ ಮಾಡಿದೆ.

"ಘಟನೆಯಲ್ಲಿ ಗಾಯಗೊಂಡವರು ಮತ್ತು ಮೃತಪಟ್ಟವರು ಇದ್ದಾರೆ. ಪೊಲೀಸರು ತಕ್ಷಣಕ್ಕೆ ಸಂತ್ರಸ್ತರ ಲಿಂಗ ಹಾಗೂ ವಯಸ್ಸು ಮತ್ತು ಸಂಖ್ಯೆಯನ್ನು ಲೆಕ್ಕಾಚಾರ ಮಾಡುವಲ್ಲಿ ನಿರತರಾಗಿದ್ದಾರೆ" ಎಂದು ಪೊಲೀಸ್ ಪ್ರಕಟಣೆ ಹೇಳಿದೆ.

ಸ್ವೀಡನ್ ರಾಜಧಾನಿಯ ಉತ್ತರ ಭಾಗದ ರಾಯಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಳಿ ಓಸ್ಟರಾಮಾಮ್ ಜಿಲ್ಲೆಯ ವಲ್ಹಾಲ್ಲಾವಗನ್‍ನಲ್ಲಿ ಬಸ್ ಪ್ರಯಾಣಿಕರ ತಂಗುದಾಣಕ್ಕೆ ಬಸ್ ನುಗ್ಗಿ ಈ ದುರಂತ ಸಂಭವಿಸಿದೆ.

ದುರಂತದ ಕಾರಣ ತಿಳಿದು ಬಂದಿಲ್ಲ. ಆದರೆ ಪೊಲೀಸರು ಇದನ್ನು "ಸ್ವಯಂಪ್ರೇರಿತವಲ್ಲದ ನರಹತ್ಯೆ" ಎಂದ ಪರಿಗಣಿಸಿದ್ದಾರೆ. ತೀವ್ರವಾಗಿ ಹಾನಿಗೀಡಾಗಿರುವ ಬಸ್ಸಿನ ಚಾಲಕನನ್ನು ಬಂಧಿಸಿ, ವಿಚಾರಣೆಗೆ ಗುರಿಪಡಿಸಲಾಗಿದೆ. ಇದು ಸೇವೆಯಲ್ಲಿಲ್ಲದ ಸಿಟಿ ಬಸ್ ಆಗಿದ್ದರಿಂದ ಬಸ್ಸಿನಲ್ಲಿ ಪ್ರಯಾಣಿಕರು ಇರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News