×
Ad

ಗಾಝಾ ಆಸ್ಪತ್ರೆ ಮೇಲಿನ ದಾಳಿಗೆ ಖಂಡನೆ: ಇಸ್ರೇಲ್ ಗೆ ಆಗಮಿಸಿದ ಜೋ ಬೈಡನ್

Update: 2023-10-18 13:45 IST

US President Joe Biden | photo: PTI

ಏರ್ ಫೋರ್ಸ್ ಒನ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರ ಮಧ್ಯಪ್ರಾಚ್ಯ ರಾಜತಾಂತ್ರಿಕ ಭೇಟಿ, ಗಾಝಾ ಆಸ್ಪತ್ರೆಯೊಂದರ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ನೂರಾರು ಮಂದಿ ಸಾವಿಗೀಡಾದ ನಂತರ ರದ್ದಾಗಿದ್ದರಿಂದ ಅವರು ಇಸ್ರೇಲ್‌ ಗೆ ಸೀಮಿತ ಭೇಟಿಗಾಗಿ ಆಗಮಿಸಿದ್ದಾರೆ. ಈ ಮೊದಲು, ಅವರು ಇಂದು ಜೋರ್ಡಾನ್ ಗೆ ಭೇಟಿ ನೀಡಬೇಕಿತ್ತು.

ಅಕ್ಟೋಬರ್ 7ರಂದು ನಡೆದಿದ್ದ ಹಮಾಸ್ ದಾಳಿಯ ವಿರುದ್ಧ ಇಸ್ರೇಲ್ ಗೆ ಬೆಂಬಲ ಸೂಚಿಸಲು ಹಾಗೂ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವ ಭಾಗವಾಗಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಇದೀಗ ಇಸ್ರೇಲ್ ಗೆ ಮಾತ್ರ ಭೇಟಿ ನೀಡಿದ್ದಾರೆ.

ಬೈಡನ್ ಆಡಳಿತಾವಧಿಯಲ್ಲಿ ಈ ಭೇಟಿ ಅತ್ಯಂತ ಪ್ರಯಾಸಕರದ್ದಾಗಿದ್ದು, ಗಾಝಾಗೆ ಮಾನವೀಯ ನೆರವು ಒದಗಿಸಬೇಕು ಎಂದು ಪ್ರತಿಪಾದಿಸುತ್ತಲೇ ಇಸ್ರೇಲ್ ಗೆ ಬೆಂಬಲಿಸಬೇಕಾದ ಸಂದಿಗ್ಧಕ್ಕೆ ಸಿಲುಕಿದ್ದಾರೆ. ಆ ಮೂಲಕ ಯಾವುದೇ ಪ್ರಾದೇಶಿಕ ಅಸಮತೋಲನವಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಗಾಝಾದಲ್ಲಿ ನಡೆದಿರುವ ಆಸ್ಪತ್ರೆಯ ಮೇಲಿನ ದಾಳಿಗೆ ಇಸ್ರೇಲ್ ವೈಮಾನಿಕ ದಾಳಿ ಕಾರಣವೆಂದು ಹಮಾಸ್ ಆರೋಪಿಸಿದ್ದರೆ, ಗಾಝಾದಿಂದ ಹಾರಿಸಿದ ಕ್ಷಿಪಣಿಯು ತಪ್ಪಾಗಿ ಹಾರಿರುವುದರಿಂದ ಈ ದುರ್ಘಟನೆ ನಡೆದಿದೆ ಎಂದು ಇಸ್ರೇಲ್ ಪ್ರತ್ಯಾರೋಪ ಮಾಡಿದೆ. ಇದರಿಂದ ಜೋ ಬೈಡನ್ ನಿಜಕ್ಕೂ ಇಸ್ರೇಲ್ ‍ಪ್ರವಾಸ ಮಾಡಲಿದ್ದಾರೆಯೆ ಎಂಬ ಕುರಿತೂ ಊಹಾಪೋಹಗಳು ಸೃಷ್ಟಿಯಾಗಿದ್ದವು.

ಜೋ ಬೈಡನ್ ಏರ್ ಫೋರ್ಸ್ ಒನ್ ವಿಮಾನದ ಮೆಟ್ಟಿಲೇರುತ್ತಿದ್ದಂತೆಯೆ, ಇತ್ತ ಫೆಲೆಸ್ತೀನ್ ಅಧ್ಯಕ್ಷ ಮಹಮುದ್ ಅಬ್ಬಾಸ್, ಜೋರ್ಡಾನ್ ದೊರೆ ಅಬ್ದುಲ್ಲಾ II ಹಾಗೂ ಈಜಿಪ್ಟ್ ಅಧ್ಯಕ್ಷರೊಂದಿಗಿನ ಪೂರ್ವನಿಯೋಜಿತ ನಾಲ್ಕು ದಿನಗಳ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಜೋರ್ಡಾನ್ ಪ್ರಕಟಿಸಿತ್ತು.

ಇತ್ತೀಚಿನ ದಿನಗಳಲ್ಲಿ ಮಾನವೀಯ ದುರಂತವನ್ನು ಎದುರಿಸುತ್ತಿರುವ ಗಾಝಾದಲ್ಲಿನ ನಾಗರಿಕರ ಜೀವ ರಕ್ಷಿಸಬೇಕು ಎಂದು ಬೈಡನ್ ಇಸ್ರೇಲ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇದರ ಬೆನ್ನಿಗೇ ಗಾಝಾದ ಆಸ್ಪತ್ರೆ ಮೇಲಿನ ವೈಮಾನಿಕ ದಾಳಿಯಿಂದ ಬೈಡನ್ ಆಕ್ರೋಶಗೊಂಡಿದ್ದು, ಬೈಡನ್ ರ ಇಸ್ರೇಲ್ ಭೇಟಿಯ ಉದ್ದೇಶದ ವ್ಯಾಪ್ತಿ ಕಿರಿದಾಗಲಿದೆ ಎಂದು ಹೇಳಲಾಗಿದೆ. ಇಸ್ರೇಲ್-ಹಮಾಸ್ ನಡುವಿನ ಯುದ್ಧವು ಮಧ್ಯಪ್ರಾಚ್ಯಕ್ಕೂ ವಿಸ್ತರಿಸದಂತೆ ತಡೆಯಲು ಜೋ ಬೈಡನ್ ಯತ್ನಿಸುತ್ತಿರುವುದರಿಂದ ಇಂತಹ ಮಾತುಗಳು ಕೇಳಿ ಬರುತ್ತಿವೆ.

ಈ ನಡುವೆ, ಹಮಾಸ್ ಅನ್ನು ನಿರ್ಮೂಲನೆ ಮಾಡುವುದು ಇಸ್ರೇಲ್ ನ ಕರ್ತವ್ಯವಾಗಿದೆ ಎಂದು ಜೋ ಬೈಡನ್ ಹೇಳಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News