ಇರಾನ್ ಮೇಲಿನ ದಾಳಿಯು ನಿರೀಕ್ಷೆಗೂ ಮೀರಿ ಯಶಸ್ವಿ: ಡೊನಾಲ್ಡ್ ಟ್ರಂಪ್
PC: screengrab/aljazeera
ವಾಷಿಂಗ್ಟನ್: ತಡರಾತ್ರಿ ಇರಾನ್ ಮೇಲೆ ಅಮೆರಿಕವು ಮಾಡಿದ ವಾಯು ದಾಳಿಗಳು ಯಶಸ್ವಿಯಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್ ಮೇಲೆ ದಾಳಿ ನಡೆಸಿದ ನಂತರ ಶ್ವೇತ ಭವನದಲ್ಲಿ ದೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಅಮೆರಿಕವು ಇರಾನ್ ಮೇಲೆ ಮಾಡಿದ ವಾಯು ದಾಳಿಯ ಉದ್ದೇಶ ಪರಮಾಣು ಪುಷ್ಟೀಕರಣ ಸಾಮರ್ಥ್ಯವನ್ನು ನಿಲ್ಲಿಸುವುದು ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವ ವಿಶ್ವದ ನಂಬರ್ ಒನ್ ರಾಷ್ಟ್ರದಿಂದ ಒಡ್ಡಲಾದ ಪರಮಾಣು ಬೆದರಿಕೆಯನ್ನು ನಿಲ್ಲಿಸುವುದಾಗಿತ್ತು ಎಂದರು.
ಈ ವಾಯು ದಾಳಿಯ ಕಾರ್ಯಾಚರಣೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಒಂದು ತಂಡವಾಗಿ ಜಂಟಿಯಾಗಿ ಕೆಲಸ ಮಾಡಿದೆ. ನಾನು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ ಧನ್ಯವಾದ ಹೇಳಲು ಮತ್ತು ಅಭಿನಂದಿಸಲು ಬಯಸುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.
"ಬಹುಶಃ ಯಾವುದೇ ತಂಡವು ಹಿಂದೆಂದೂ ಇಷ್ಟೊಂದು ಯಶಸ್ವಿಯಾಗಿ ಕೆಲಸ ಮಾಡಿಲ್ಲ. ಇಸ್ರೇಲ್‌ಗೆ ಈ ಭಯಾನಕ ಬೆದರಿಕೆಯನ್ನು ಅಳಿಸಲು ನಾವು ಬಹಳ ದೂರ ಸಾಗಿದ್ದೇವೆ. ಇಸ್ರೇಲ್ ಮಾಡಿದ ಅದ್ಭುತ ಕೆಲಸಕ್ಕಾಗಿ ನಾನು ಇಸ್ರೇಲ್ ಮಿಲಿಟರಿಗೆ ಧನ್ಯವಾದ ಹೇಳಲು ಬಯಸುತ್ತೇನೆ", ಎಂದು ಅವರು ಉಲ್ಲೇಖಿಸಿದ್ದಾರೆ.