ಹೌದಿಗಳಿಗೆ ನೆರವು ಆರೋಪ: ಅಮೆರಿಕ ಇಂಧನ ಇಲಾಖೆಯ ಎಂಜಿನಿಯರ್ ಬಂಧನ
Photo credit : timesofindia
ವಾಷಿಂಗ್ಟನ್: ಇರಾನ್ ಬೆಂಬಲಿತ ಹೌದಿ ಬಂಡುಕೋರರಿಗೆ ವಸ್ತು ಹಾಗೂ ತಾಂತ್ರಿಕ ನೆರವು ನೀಡಿದ ಆರೋಪದ ಮೇಲೆ ಅಮೆರಿಕ ಇಂಧನ ಇಲಾಖೆಯ ಎಲೆಕ್ಟ್ರಿಕಲ್ ಎಂಜಿನಿಯರ್‌ವೊಬ್ಬರನ್ನು ಬಂಧಿಸಲಾಗಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.
ಬಂಧಿತರನ್ನು ವಾಷಿಂಗ್ಟನ್‌ನ ರಿಚ್‌ಲ್ಯಾಂಡ್ ನಿವಾಸಿ 51 ವರ್ಷದ ಆಷ್ಟನ್ ಹಮೇದ್ ಎಲಬೌಡಿ ಎಂದು ಗುರುತಿಸಿಲಾಗಿದೆ.
ಹೌದಿಗಳಿಗೆ ಸ್ವಯಂ ತಯಾರಿಸಬಹುದಾದ ಸ್ಫೋಟಕಗಳಿಗಾಗಿ ಬೇಕಾಗುವ ಸಾಮಗ್ರಿಗಳು ಹಾಗೂ ಡ್ರೋನ್‌ಗಳ ಬಿಡಿಭಾಗಗಳನ್ನು ಖರೀದಿಸಿದ ಆರೋಪವೂ ಅವರ ಮೇಲಿದೆ.
ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ಗುರುತಿಸಿರುವ ಸಂಘಟನೆಗಳಿಗೆ ವಸ್ತುಸಹಾಯ ನೀಡುವುದನ್ನು ನಿಷೇಧಿಸುವ ಕಾನೂನಿನ ಅಡಿಯಲ್ಲಿ ಎಲಬೌಡಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರು ಶುಕ್ರವಾರ ಮೊದಲ ಬಾರಿಗೆ ನ್ಯಾಯಾಲಯದ ಮುಂದೆ ಹಾಜರಾಗುವ ನಿರೀಕ್ಷೆಯಿದೆ.
ಯೆಮನ್‌ಗೆ ಪ್ರಯಾಣಿಸಿದ ಆರೋಪ :
ಎಫ್‌ಬಿಐ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಹೌತಿಗಳ ಸಂವಹನ ಸಾಮರ್ಥ್ಯವನ್ನು ಸುಧಾರಿಸಲು ನೆರವಾಗುವ ಉದ್ದೇಶದಿಂದ ಎಲಬೌಡಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಯೆಮನ್‌ಗೆ ಪ್ರಯಾಣಿಸಿದ್ದರು ಎನ್ನಲಾಗಿದೆ.
ಯೆಮನ್‌ಗೆ ಪ್ರವೇಶಿಸಲು ಮತ್ತು ಅಲ್ಲಿಂದ ಹೊರಬರಲು ತಮ್ಮನ್ನು ರಹಸ್ಯವಾಗಿ ಕರೆದೊಯ್ಯಬೇಕಾಯಿತು ಎಂದು ಅವರು ಎಫ್‌ಬಿಐನ ಮಾಹಿತಿ ಮೂಲಗಳಿಗೆ ತಿಳಿಸಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಹೌದಿಗಳ ನಿಯಂತ್ರಣದಲ್ಲಿರುವ ಯೆಮನ್‌ನ ರಾಜಧಾನಿ ಸನಾಗೆ ತೆರಳಿ ಅಲ್ಲಿನ ಸರ್ಕಾರದ ಮಟ್ಟದ ಸಂಪರ್ಕಗಳನ್ನು ಸ್ಥಾಪಿಸುವ ಉದ್ದೇಶ ಎಲಬೌಡಿಗಿತ್ತು ಎನ್ನಲಾಗಿದೆ. ಆದರೆ ಅವರು ಅಂತಿಮವಾಗಿ ಸನಾಗೆ ತಲುಪಲು ಸಾಧ್ಯವಾಗಲಿಲ್ಲ ಎಂದು ಎಫ್‌ಬಿಐ ತಿಳಿಸಿದೆ.
ಅಮೆರಿಕಕ್ಕೆ ಮರಳಿದ ಬಳಿಕ, ತಾವು ಉದ್ಯೋಗದ ನಿಮಿತ್ತ ಒಮಾನ್‌ನಿಂದ ಬಂದಿದ್ದು, ರಕ್ಷಣಾ ವ್ಯವಸ್ಥೆಗಳನ್ನು ಪರಿಶೀಲಿಸುವ ಅಮೆರಿಕ ಸರ್ಕಾರದ ತಂಡದ ಭಾಗವಾಗಿದ್ದಾಗಿ ಎಲಬೌಡಿ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಅಧಿಕಾರಿಗಳಿಗೆ ಹೇಳಿದ್ದರು ಎನ್ನಲಾಗಿದೆ.
ಆದರೆ, ಎಲಬೌಡಿಯ ಅಂತರರಾಷ್ಟ್ರೀಯ ಪ್ರಯಾಣದ ಬಗ್ಗೆ ಅಥವಾ ಅವರೊಂದಿಗೆ ಸಂಬಂಧಿಸಿದ ಯಾವುದೇ ಇಂಧನ ಇಲಾಖೆ ಕ್ಷಿಪಣಿ ಪರಿಶೀಲನಾ ಕಾರ್ಯಕ್ರಮದ ಬಗ್ಗೆ ತಮ್ಮ ಮೇಲಧಿಕಾರಿಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟಕ ಸಾಮಗ್ರಿ, ಡ್ರೋನ್ ಬಿಡಿಭಾಗ ಖರೀದಿ ಆರೋಪ :
ಮನೆಯಲ್ಲಿ ತಯಾರಿಸಬಹುದಾದ ಸ್ಫೋಟಕಗಳನ್ನು ತಯಾರಿಸಲು ಬಳಸಬಹುದಾದ ಕೆಲವು ರಾಸಾಯನಿಕಗಳನ್ನು ಎಲಬೌಡಿ ಖರೀದಿಸಿರುವ ಮಾಹಿತಿ ದೊರೆತ ಬಳಿಕ ಎಫ್‌ಬಿಐ ತನಿಖೆ ಆರಂಭಿಸಿತು. ಇವುಗಳಲ್ಲಿ ಅಸಿಟೋನ್ ಮತ್ತು ಸೋಡಿಯಂ ಬೈಸಲ್ಫೇಟ್ ಕೂಡ ಸೇರಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಡ್ರೋನ್‌ಗಳಲ್ಲಿ ಬಳಸಬಹುದಾದ ವಿವಿಧ ಬಿಡಿಭಾಗಗಳನ್ನೂ ಅವರು ಖರೀದಿಸಿದ್ದರು ಎಂದು ಎಫ್‌ಬಿಐ ಹೇಳಿದೆ.
ತನಿಖೆಯ ಸಂದರ್ಭದಲ್ಲಿ ಎಲಬೌಡಿ ಹಲವು ಮಾಹಿತಿ ಮೂಲಗಳೊಂದಿಗೆ ಸಂಪರ್ಕದಲ್ಲಿದ್ದರು. ಅವರಲ್ಲಿ ಒಬ್ಬರು ಹೌತಿ ಕರ್ನಲ್‌ನಂತೆ ಪರಿಚಯಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೌತಿ ಸಂಘಟನೆಗೆ ನೆರವಾಗುವ ಪ್ರಯತ್ನದ ಭಾಗವಾಗಿ ಸಂವಹನ ಉಪಕರಣಗಳ ಕುರಿತು ಎಲಬೌಡಿ ಸಲಹೆ ಮತ್ತು ನೆರವು ನೀಡಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.