Flydubai ವಿಮಾನದಲ್ಲಿ ಕಾಕ್ ಪಿಟ್ ನಲ್ಲಿ ದಾಳಿ: ಇಸ್ರೇಲ್ ನ ಕಠಿಣ ಭದ್ರತೆಯಲ್ಲೇ ಲೋಪ!
►ವಿಮಾನವು ಜೋರ್ಡಾನ್ ವಾಯುಪ್ರದೇಶವನ್ನು ದಾಟಿ 180 ಡಿಗ್ರಿ ತಿರುವು ಪಡಿದಿದ್ದೇಕೆ? ► “ಪೈಲಟ್ ನಿಂದ ದಾಳಿಯಾಗುತ್ತದೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ” ►ಪ್ರಿಯಾಂಜಲಿ ನಾರಾಯಣ್ - hindustantimes. com ವರದಿ
Photo Credit : hindustantimes.com
ಟೆಲ್ ಅವೀವ್, ಅ. 2: ಟೆಲ್ ಅವೀವ್ ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನದ ಕಾಕ್ ಪಿಟ್ ನಲ್ಲಿ ನಡೆದ ದಾಳಿಯ ಬಳಿಕ, ಇಸ್ರೇಲ್ ಗೆ ಹಾರುವ ವಿದೇಶಿ ವಿಮಾನಯಾನ ಸಂಸ್ಥೆಗಳ ವಿಮಾನಗಳ ಭದ್ರತಾ ವ್ಯವಸ್ಥೆ ಕುರಿತು ಪ್ರಶ್ನೆಗಳು ಎದ್ದಿವೆ. ಘಟನೆಯ ಹಿನ್ನೆಲೆಯಲ್ಲಿ ಇಸ್ರೇಲ್ ನ ಕಠಿಣ ವಿಮಾನಯಾನ ಭದ್ರತಾ ವ್ಯವಸ್ಥೆಯೂ ಪರಿಶೀಲನೆಗೆ ಒಳಪಟ್ಟಿದೆ.
ಇಸ್ರೇಲ್ ವಿಶ್ವದಲ್ಲೇ ಅತ್ಯಂತ ಕಠಿಣ ವಿಮಾನಯಾನ ಭದ್ರತಾ ಕ್ರಮಗಳನ್ನು ಹೊಂದಿರುವ ದೇಶಗಳ ಪೈಕಿ ಒಂದಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಕೂಡ ಅಂತರರಾಷ್ಟ್ರೀಯ ವಿಮಾನಯಾನ ಸುರಕ್ಷತಾ ಮಾನದಂಡಗಳನ್ನು ಪಾಲಿಸುತ್ತದೆ. ಆದರೂ, ಬುಧವಾರ ದುಬೈನಿಂದ ಟೆಲ್ ಅವೀವ್ ಗೆ ಹೊರಟ ‘ಫ್ಲೈದುಬೈ’ ವಿಮಾನ FZ1073ರಲ್ಲಿ ಸಂಭವಿಸಿದ ಅಪಾಯಕಾರಿ ಘಟನೆಯನ್ನು ತಡೆಯಲು ಈ ಭದ್ರತಾ ಕ್ರಮಗಳು ವಿಫಲವಾಗಿವೆ ಎಂದು ವರದಿ ತಿಳಿಸಿದೆ.
‘ದಿ ಟೈಮ್ಸ್ ಆಫ್ ಇಸ್ರೇಲ್’ ಉಲ್ಲೇಖಿಸಿರುವ ‘ಚಾನೆಲ್ 12’ ವರದಿ ಪ್ರಕಾರ, ಇಸ್ರೇಲ್ ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರದ ದೇಶಗಳ ಪೈಲಟ್ ಗಳು ಇಸ್ರೇಲ್ ಗೆ ಹಾರುವುದಕ್ಕೆ ನಿರ್ಬಂಧವಿದೆ. ಆದರೂ, ಇತ್ತೀಚಿನ ವರ್ಷಗಳಲ್ಲಿ ಒಮಾನ್ ನ ಡಜನ್ ಗಟ್ಟಲೆ ಪೈಲಟ್ ಗಳು ‘ಫ್ಲೈದುಬೈ’ ವಿಮಾನಗಳಲ್ಲಿ ಟೆಲ್ ಅವೀವ್ ಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ.
ರಾಜತಾಂತ್ರಿಕ ಸಂಬಂಧವಿಲ್ಲದ ದೇಶಗಳ ಪೈಲಟ್ ಗಳ ಮೇಲಿನ ನಿರ್ಬಂಧವನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಇಸ್ರೇಲ್ ನ ಭದ್ರತಾ ಸಂಸ್ಥೆ ‘ಶಿನ್ ಬೆಟ್’ ವಿಫಲವಾಗಿದೆ ಎಂದು ವರದಿ ಆರೋಪಿಸಿದೆ. ಇದು ಇಸ್ರೇಲ್ ನ ವಿಮಾನಯಾನ ಭದ್ರತಾ ವ್ಯವಸ್ಥೆಯಲ್ಲಿನ ಪ್ರಮುಖ ಲೋಪದತ್ತ ಬೆರಳು ಮಾಡಿದೆ.
ಪ್ರಯಾಣಿಕರು ಮಧ್ಯಪ್ರವೇಶಿಸುವ ಮೊದಲು ಸಹ-ಪೈಲಟ್ ಕಾಕ್ ಪಿಟ್ ನಲ್ಲೇ ಕ್ಯಾಪ್ಟನ್ ಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಎಂಟು ಸಿಬ್ಬಂದಿ ಸೇರಿದಂತೆ ಒಟ್ಟು 182 ಮಂದಿ ವಿಮಾನದಲ್ಲಿದ್ದರು. ವಿಮಾನವು ಬಳಿಕ ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿತು.
ಸೌದಿ ಅರೇಬಿಯಾ, UAE ಮತ್ತು ಇಸ್ರೇಲ್ ನ ಅಧಿಕಾರಿಗಳು ಘಟನೆಯ ತನಿಖೆ ನಡೆಸುತ್ತಿದ್ದಾರೆ. ದಾಳಿಯ ಉದ್ದೇಶ ಪತ್ತೆಹಚ್ಚುವ ಪ್ರಯತ್ನದಲ್ಲಿ ಅಮೆರಿಕ ಮತ್ತು ಒಮಾನ್ ಕೂಡ ಸಹಕರಿಸುತ್ತಿವೆ.
ಈ ಘಟನೆಯವರೆಗೆ ಪೈಲಟ್ ಅಥವಾ ಸಿಬ್ಬಂದಿಯಿಂದಲೇ ಬೆದರಿಕೆ ಎದುರಾಗುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸಲಾಗಿರಲಿಲ್ಲ ಎಂದು ಇಸ್ರೇಲ್ ನ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಐಯಾಲ್ ಹುಲಾಟಾ ಹೇಳಿದ್ದಾರೆ ಎಂದು ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ. ಭದ್ರತಾ ಕ್ರಮಗಳು ಸಾಂಪ್ರದಾಯಿಕವಾಗಿ ಪ್ರಯಾಣಿಕರು ಮತ್ತು ಅವರ ಲಗೇಜ್ ಗಳ ಮೇಲೆ ಹೆಚ್ಚು ಗಮನಹರಿಸುತ್ತಿದ್ದವು. ಇನ್ನು ಮುಂದೆ ಸಿಬ್ಬಂದಿಯೂ ಕಠಿಣ ತಪಾಸಣೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
►ವಿದೇಶಿ ವಿಮಾನಗಳ ಭದ್ರತೆಯ ಪ್ರಶ್ನೆ
ಇಸ್ರೇಲ್ ನ ಭದ್ರತಾ ಪ್ರೋಟೋಕಾಲ್ ಗಳು ಇಸ್ರೇಲಿ ವಿಮಾನಯಾನ ಸಂಸ್ಥೆಗಳು ಹಾಗೂ ಬೆನ್-ಗುರಿಯನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿವೆ. ಆದರೆ ವಿದೇಶಿ ವಿಮಾನಯಾನ ಸಂಸ್ಥೆಗಳು ಕಾರ್ಯನಿರ್ವಹಿಸುವ ದೇಶಗಳಲ್ಲಿ ಇಸ್ರೇಲ್ ಗೆ ತೆರಳುವ ವಿಮಾನಗಳ ಭದ್ರತಾ ಕ್ರಮಗಳು ಬದಲಾಗಬಹುದು. ಇಂತಹ ಸಂದರ್ಭಗಳಲ್ಲಿ ಇಸ್ರೇಲಿ ಅಧಿಕಾರಿಗಳಿಗೆ ನೇರವಾಗಿ ಮೇಲ್ವಿಚಾರಣೆ ನಡೆಸುವುದು ಕಷ್ಟವಾಗಬಹುದು.
ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯ ದೃಷ್ಟಿಯಿಂದ ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿರುವ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಅಸ್ಥಿರ ಪ್ರದೇಶದಲ್ಲಿದ್ದರೂ ಸುರಕ್ಷತೆಯ ಖ್ಯಾತಿಯನ್ನು ಹೊಂದಿದೆ ಎಂದು ಇಂಗ್ಲೆಂಡ್ ನ ಕೋವೆಂಟ್ರಿ ವಿಶ್ವವಿದ್ಯಾಲಯದ ವಾಯುಯಾನ ಭದ್ರತೆಯ ಸಂದರ್ಶಕ ಪ್ರಾಧ್ಯಾಪಕ ಫಿಲಿಪ್ ಬಾಮ್ ಹೇಳಿದ್ದಾರೆ.
ದುಬೈನಿಂದ ಹೊರಡುವ ವಿಮಾನದಲ್ಲಿ ಭಯೋತ್ಪಾದಕ ದಾಳಿ ನಡೆಯುವುದನ್ನು ಅಲ್ಲಿನ ಅಧಿಕಾರಿಗಳು ಸಹಿಸುವುದಿಲ್ಲ ಎಂಬುದರ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ ಎಂದು ಬಾಮ್ ಹೇಳಿದ್ದಾರೆ.
►ಪೈಲಟ್ ಗಳ ತಪಾಸಣೆಯಲ್ಲಿ ವ್ಯತ್ಯಾಸ
ವಿಮಾನ ಸಿಬ್ಬಂದಿಯ ಹಾರಾಟಕ್ಕೂ ಮುನ್ನ ನಡೆಯುವ ತಪಾಸಣೆ ಸಾಮಾನ್ಯವಾಗಿ ಪ್ರಯಾಣಿಕರಿಗೆ ನಡೆಯುವ ತಪಾಸಣೆಯನ್ನು ಹೋಲಬೇಕು. ಆದರೆ ಭದ್ರತಾ ಕಾರ್ಯವಿಧಾನಗಳು ವಿಶ್ವದಾದ್ಯಂತ ಒಂದೇ ರೀತಿಯಾಗಿಲ್ಲ ಎಂದು ಇಂಟರ್ ನ್ಯಾಷನಲ್ SOSನ ಹಿರಿಯ ಭದ್ರತಾ ಸಲಹೆಗಾರ ಹಾಗೂ ಬೋಯಿಂಗ್ ನ ಮಾಜಿ ಮುಖ್ಯ ಭದ್ರತಾ ಅಧಿಕಾರಿ ಡೇವ್ ಕೊಮೆಂಡಟ್ ಹೇಳಿದ್ದಾರೆ.
ಕ್ಯಾಪ್ಟನ್ ಗೆ ಇರಿದ ವಸ್ತು ಯಾವುದು ಎಂಬುದನ್ನು ತನಿಖಾಧಿಕಾರಿಗಳು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಆ ವಸ್ತುವನ್ನು ವಿಮಾನದೊಳಗೆ ಕೊಂಡೊಯ್ಯಲಾಗಿತ್ತೇ ಅಥವಾ ವಿಮಾನದ ಒಳಗಿನಿಂದಲೇ ದೊರೆತಿತ್ತೇ ಎಂಬುದೂ ಸ್ಪಷ್ಟವಾಗಿಲ್ಲ.
ಇಸ್ರೇಲ್ ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರದ ರಾಷ್ಟ್ರಗಳ ನಾಗರಿಕರಾಗಿರುವ ಪೈಲಟ್ ಗಳು ಇಸ್ರೇಲ್ ಗೆ ಹಾರುವುದನ್ನು ತಡೆಯಲು ವಿದೇಶಿ ವಿಮಾನಯಾನ ಸಂಸ್ಥೆಗಳೊಂದಿಗೆ ಇಸ್ರೇಲ್ ದೀರ್ಘಕಾಲದಿಂದ ಒಪ್ಪಂದಗಳನ್ನು ಹೊಂದಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಹೇಳಿದ್ದಾರೆ.
ಇಸ್ರೇಲಿ ಅಧಿಕಾರಿಗಳು ಫ್ಲೈದುಬೈ ಸಹ-ಪೈಲಟ್ ಒಮಾನ್ ನವರು ಎಂದು ತಿಳಿಸಿದ್ದಾರೆ. ಇಸ್ರೇಲ್ ಮತ್ತು ಒಮಾನ್ ನಡುವೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳಿಲ್ಲ. ಹೀಗಾಗಿ, ಅಂತಹ ವ್ಯಕ್ತಿ ಟೆಲ್ ಅವೀವ್ ಗೆ ತೆರಳುತ್ತಿದ್ದ ವಿಮಾನದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದ್ದರು ಎಂಬ ಪ್ರಶ್ನೆ ಎದ್ದಿದೆ.
‘ಸ್ಪಷ್ಟವಾಗಿ, ಇಲ್ಲಿ ಒಂದು ಲೋಪದೋಷವಿತ್ತು. ನಾವು ಅದನ್ನು ನೋಡಿಕೊಳ್ಳುತ್ತಿದ್ದೇವೆ’ ಎಂದು ನೆತನ್ಯಾಹು ‘ಫಾಕ್ಸ್ ನ್ಯೂಸ್’ನ ‘ಫಾಕ್ಸ್ ಅಂಡ್ ಫ್ರೆಂಡ್ಸ್’ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇಸ್ರೇಲ್ ಗೆ ಬರುವ ವಿಮಾನಗಳು ಇಸ್ರೇಲಿ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವವೆಯೇ ಅಥವಾ ವಿದೇಶಿ ಸಂಸ್ಥೆಗಳು ನಿರ್ವಹಿಸುವವೆಯೇ ಎಂಬುದನ್ನು ಲೆಕ್ಕಿಸದೆ ಭದ್ರತಾ ಮುನ್ನೆಚ್ಚರಿಕೆಗಳನ್ನು ಹೆಚ್ಚಿಸಲಾಗುತ್ತದೆ ಎಂದು ಪ್ರಧಾನಿ ಕಚೇರಿಯ ವಕ್ತಾರ ಡೊರೊನ್ ಸ್ಪೀಲ್ ಮನ್ ಹೇಳಿದ್ದಾರೆ. ಇಸ್ರೇಲ್ ಗೆ ಹಾರುವ ಪೈಲಟ್ ಗಳ ಪರಿಶೀಲನೆ ನಡೆಯುತ್ತದೆ ಮತ್ತು ಅವರ ಗುರುತುಗಳು ಇಸ್ರೇಲಿ ಅಧಿಕಾರಿಗಳಿಗೆ ತಿಳಿದಿರುತ್ತವೆ ಎಂದೂ ಅವರು ಹೇಳಿದ್ದಾರೆ.
ಫ್ಲೈದುಬೈ ವಿಮಾನದಲ್ಲಿ ಯಾವುದೇ ಇಸ್ರೇಲಿ ಏರ್ ಮಾರ್ಷಲ್ ಗಳು ಇರಲಿಲ್ಲ. ಪ್ರಯಾಣಿಕರಿಗೆ ನೆರವಾದವರು ನಾಗರಿಕರಾಗಿದ್ದರು ಎಂದು ಸ್ಪೀಲ್ ಮನ್ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಪೈಲಟ್ ಗಳ ಪರಿಶೀಲನೆ ಮತ್ತು ಪರವಾನಗಿ ಮಾನದಂಡಗಳನ್ನು ನಿಗದಿಪಡಿಸುತ್ತದೆ. ಆದರೆ ರಾಷ್ಟ್ರೀಯ ನಿಯಂತ್ರಕರು ಹಾಗೂ ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಅವಶ್ಯಕತೆಗಳನ್ನು ವಿಧಿಸಬಹುದು.
ವಾಯುಯಾನ ಭದ್ರತಾ ತಜ್ಞ ಮೆನಾಚೆಮ್ ಬಚ್ರಾಚ್ ಪ್ರಕಾರ, ಇಸ್ರೇಲ್ ತನ್ನದೇ ಸಿಬ್ಬಂದಿಯನ್ನು ಪರಿಶೀಲಿಸುವ ಬದಲು ವಿದೇಶಿ ಸರಕಾರಗಳು ಮತ್ತು ವಿಮಾನಯಾನ ಸಂಸ್ಥೆಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿದೆ. ಬುಧವಾರದ ಘಟನೆ ಭದ್ರತಾ ವ್ಯವಸ್ಥೆಯ ಮೂಲ ದೋಷಕ್ಕಿಂತ ನಿಯಮಗಳ ಅನುಷ್ಠಾನದಲ್ಲಿನ ಲೋಪವನ್ನು ಸೂಚಿಸಬಹುದು ಎಂದು ಅವರು ಹೇಳಿದ್ದಾರೆ.
‘ನಾವು ಭದ್ರತೆಯನ್ನು ಬಿಗಿಗೊಳಿಸುವ ಮೊದಲು, ಯಾರಾದರೂ ಪ್ರೋಟೋಕಾಲ್ ಗಳನ್ನು ಪಾಲಿಸದೇ ಇರುವ ಸಾಧ್ಯತೆಯಿದೆ’ ಎಂದು ಬಚ್ರಾಚ್ ಹೇಳಿದ್ದಾರೆ.
ಸಹ-ಪೈಲಟ್ ಕುರಿತು ಸಹೋದ್ಯೋಗಿಗಳು ಈ ಹಿಂದೆ ಯಾವುದೇ ಆತಂಕ ಅಥವಾ ಎಚ್ಚರಿಕೆ ವ್ಯಕ್ತಪಡಿಸಿದ್ದರೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸಲಿದ್ದಾರೆ. ಅಂತಹ ದೂರುಗಳು ಅಥವಾ ಆತಂಕಗಳು ಇದ್ದಿದ್ದರೆ, ವಿಮಾನಯಾನ ಸಂಸ್ಥೆ ಅವುಗಳಿಗೆ ಹೇಗೆ ಪ್ರತಿಕ್ರಿಯಿಸಿತ್ತು ಎಂಬುದನ್ನೂ ಪರಿಶೀಲಿಸಲಾಗುತ್ತದೆ ಎಂದು ಕೊಮೆಂಡಟ್ ಹೇಳಿದ್ದಾರೆ.
ಇಸ್ರೇಲಿನ ಪ್ರಮುಖ ವಿಮಾನಯಾನ ಸಂಸ್ಥೆ ‘ಎಲ್ ಅಲ್’ ತನ್ನ ಪೈಲಟ್ ಗಳು ಹಾರಾಟಕ್ಕೆ ಯೋಗ್ಯರಾಗಿದ್ದಾರೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸುತ್ತದೆ. ಆದರೆ ಇತರ ವಿಮಾನಯಾನ ಸಂಸ್ಥೆಗಳು ಇಂತಹ ಪರಿಶೀಲನೆಗಳನ್ನು ಕಡಿಮೆ ಬಾರಿ ನಡೆಸಬಹುದು ಎಂದು ವಾಯುಯಾನ ಸೈಬರ್ ಭದ್ರತಾ ಸಲಹಾ ಸಂಸ್ಥೆ ಸಿವೈಯೇಷನ್ ನ ಅಧ್ಯಕ್ಷ ಹಾಗೂ ಬೆನ್-ಗುರಿಯನ್ ವಿಮಾನ ನಿಲ್ದಾಣದಲ್ಲಿನ ಎಲ್ ಅಲ್ ನ ಮಾಜಿ ಭದ್ರತಾ ಮುಖ್ಯಸ್ಥ ಅರಿಕ್ ಅರಾದ್ ಹೇಳಿದ್ದಾರೆ.
ವಿಮಾನವು ಎತ್ತರದಲ್ಲಿ ತೀವ್ರವಾಗಿ ಕುಸಿದ ಬಳಿಕ ಕಳುಹಿಸಲಾದ ತೊಂದರೆ ಸಂಕೇತಗಳಿಗೆ ಅಧಿಕಾರಿಗಳು ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನೂ UAE ಮತ್ತು ಇಸ್ರೇಲ್ ನ ತನಿಖಾಧಿಕಾರಿಗಳು ಪರಿಶೀಲಿಸುವ ಸಾಧ್ಯತೆಯಿದೆ.
ಫ್ಲೈದುಬೈ ವಿಮಾನದ ವಾಯು ಸಂಚಾರ ನಿಯಂತ್ರಣ ಸಂವಹನಗಳನ್ನು ಆಲಿಸಿದ ವ್ಯಕ್ತಿಯೊಬ್ಬರ ಪ್ರಕಾರ, ಸಿಬ್ಬಂದಿ ವಿಮಾನ ಅಪಹರಣವಾಗಿರುವುದಾಗಿ ವರದಿ ಮಾಡಿ ಆಂಬ್ಯುಲೆನ್ಸ್ ಗಳನ್ನು ಕೋರಿದ್ದರು. ಸೌದಿ ಅರೇಬಿಯಾ ಮತ್ತು ಜೋರ್ಡಾನ್ ಅಧಿಕಾರಿಗಳು ಆರಂಭದಲ್ಲಿ ವಿಮಾನ ಇಳಿಯಲು ಅನುಮತಿ ನೀಡಲು ನಿರಾಕರಿಸಿದ್ದರು ಎಂದು ಮಾಧ್ಯಮಗಳೊಂದಿಗೆ ಮಾತನಾಡಲು ಅಧಿಕಾರವಿಲ್ಲದ ಕಾರಣ ಹೆಸರು ಬಹಿರಂಗಪಡಿಸಲು ಇಚ್ಛಿಸದ ಆ ವ್ಯಕ್ತಿ ತಿಳಿಸಿದ್ದಾರೆ.
ಬಳಿಕ ತಬೂಕ್ ನಗರದ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಝೀಝ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯಲು ಅವಕಾಶ ನೀಡುವಂತೆ ಸಿಬ್ಬಂದಿ ಸೌದಿ ಅಧಿಕಾರಿಗಳನ್ನು ಮನವೊಲಿಸಿದರು.
►ವಿಮಾನವು ಜೋರ್ಡಾನ್ ವಾಯುಪ್ರದೇಶವನ್ನು ದಾಟಿ 180 ಡಿಗ್ರಿ ತಿರುವು ಪಡಿದಿದ್ದೇಕೆ?
ಅಂತರರಾಷ್ಟ್ರೀಯ ವಿಮಾನಯಾನ ಮಾನದಂಡಗಳ ಪ್ರಕಾರ, ಅಪಹರಣ ಅಥವಾ ಇತರ ‘ಕಾನೂನುಬಾಹಿರ ಹಸ್ತಕ್ಷೇಪ’ ಎದುರಿಸುತ್ತಿರುವ ವಿಮಾನಗಳಿಗೆ ಗರಿಷ್ಠ ಸಹಾಯ ಮತ್ತು ಆದ್ಯತೆ ನೀಡಬೇಕು. ಆದರೆ, 1944ರ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಒಪ್ಪಂದದಡಿ, ಸಾಧ್ಯವಾದಷ್ಟು ಪ್ರಾಯೋಗಿಕ ನೆರವು ನೀಡಬೇಕೆಂಬ ಬಾಧ್ಯತೆ ಮಾತ್ರ ದೇಶಗಳ ಮೇಲಿದೆ. ಇದನ್ನು ‘ತುಲನಾತ್ಮಕವಾಗಿ ಮೃದು ಬಾಧ್ಯತೆ’ ಎಂದು ಮೆಕ್ ಗಿಲ್ ವಿಶ್ವವಿದ್ಯಾಲಯದ ವಾಯು ಮತ್ತು ಬಾಹ್ಯಾಕಾಶ ಕಾನೂನು ಸಂಸ್ಥೆಯ ಸಹ-ನಿರ್ದೇಶಕ ವಿನ್ಸೆಂಟ್ ಕೊರಿಯಾ ಹೇಳಿದ್ದಾರೆ.
ಗಂಭೀರ ತುರ್ತು ಪರಿಸ್ಥಿತಿಯಲ್ಲಿ ವಿಮಾನದ ರಾಷ್ಟ್ರೀಯತೆ, ಹಾರಾಟದ ಯೋಜನೆ ಅಥವಾ ರಾಜಕೀಯ ಪರಿಸ್ಥಿತಿಯನ್ನು ಲೆಕ್ಕಿಸದೆ, ಹತ್ತಿರದ ಸೂಕ್ತ ರನ್ ವೇಯಲ್ಲಿ ವಿಮಾನವನ್ನು ಸಾಧ್ಯವಾದಷ್ಟು ಬೇಗ ಇಳಿಸುವುದು ಸಾಮಾನ್ಯ ಅಭ್ಯಾಸ ಎಂದು ಮೆಕ್ಗಿಲ್ ವಿಶ್ವವಿದ್ಯಾಲಯದ ವಾಯುಯಾನ ನಿರ್ವಹಣಾ ಕಾರ್ಯಕ್ರಮದ ನಿರ್ದೇಶಕ ಜಾನ್ ಗ್ರಾಡೆಕ್ ಹೇಳಿದ್ದಾರೆ.
ಆದರೆ, ಫ್ಲೈದುಬೈ ವಿಮಾನವು ಜೋರ್ಡಾನ್ ವಾಯುಪ್ರದೇಶವನ್ನು ದಾಟಿ ತಬೂಕ್ ನ ನೈಋತ್ಯ ಭಾಗದತ್ತ ತೆರಳುವ ಮೊದಲು 180 ಡಿಗ್ರಿ ತಿರುವು ಪಡೆದದ್ದು ಏಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಗ್ರಾಡೆಕ್ ಹೇಳಿದ್ದಾರೆ. ವಿಮಾನದ ಅಗತ್ಯಗಳನ್ನು ಪೂರೈಸಲು ಹೆಚ್ಚು ಸೂಕ್ತವಾದ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸಿಬ್ಬಂದಿ ಹತ್ತಿರದ ವಿಮಾನ ನಿಲ್ದಾಣವನ್ನು ಬಿಟ್ಟು ಮುಂದೆ ಸಾಗುವುದು ಅಸಾಮಾನ್ಯವಲ್ಲ ಎಂದೂ ಅವರು ಹೇಳಿದ್ದಾರೆ.
►25 ವರ್ಷಗಳಿಂದ ಕಾಕ್ ಪಿಟ್ ಭದ್ರತೆಗೆ ಒತ್ತು
ಸೆಪ್ಟೆಂಬರ್ 11, 2001ರ ದಾಳಿಗಳ ಬಳಿಕ ಒಳನುಗ್ಗುವವರನ್ನು ಕಾಕ್ ಪಿಟ್ ನಿಂದ ಹೊರಗಿಡಲು ವಿಶ್ವದಾದ್ಯಂತ ಕಾಕ್ ಪಿಟ್ ಬಾಗಿಲುಗಳನ್ನು ಬಲಪಡಿಸಿ ಲಾಕ್ ಮಾಡುವ ವ್ಯವಸ್ಥೆ ಜಾರಿಗೆ ತರಲಾಯಿತು.
ಫ್ಲೈದುಬೈ ಘಟನೆಯು ಕಾಕ್ ಪಿಟ್ ಒಳಗಿನಿಂದಲೇ ಬೆದರಿಕೆ ಎದುರಾದಾಗ ಉಂಟಾಗಬಹುದಾದ ಅಪಾಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ತಮ್ಮ ಪ್ರಾಣವನ್ನೇ ಕಳೆದುಕೊಳ್ಳಲು ಬಯಸಿದ ಪೈಲಟ್ ಗಳಿಂದ ಸಂಭವಿಸಿದ ಹಿಂದಿನ ವಿಮಾನ ಅಪಘಾತಗಳೂ ಇದೇ ರೀತಿಯ ಅಪಾಯವನ್ನು ತೋರಿಸಿವೆ.
ಗಾಯಗೊಂಡ ಕ್ಯಾಪ್ಟನ್ ಕಾಕ್ ಪಿಟ್ ಬಾಗಿಲು ತೆರೆಯುವಷ್ಟು ಸಮಯ ಸಹ-ಪೈಲಟ್ ನ ದಾಳಿಯನ್ನು ಎದುರಿಸುವ ಮೂಲಕ ವಿಮಾನದಲ್ಲಿದ್ದ 182 ಮಂದಿಯನ್ನು ರಕ್ಷಿಸಿದರು ಎಂದು ನೆತನ್ಯಾಹು ಹೇಳಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಶಂಕಿತನನ್ನು ನಿಗ್ರಹಿಸಲು ಸಾಧ್ಯವಾಯಿತು. ಬಳಿಕ ಫ್ಲೈದುಬೈ ಸಿಬ್ಬಂದಿ ವಿಮಾನದ ನಿಯಂತ್ರಣ ಪಡೆದುಕೊಂಡು ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು.
ಸೌಜನ್ಯ: hindustantimes.com