ನೈಜೀರಿಯ ದರೋಡೆಕೋರರಿಂದ ದಾಳಿ ; 13 ವಿದ್ಯಾರ್ಥಿಗಳ ಹತ್ಯೆ
Update: 2023-11-07 23:16 IST
ಕಾನೊ: ನೈಜೀರಿಯಾದ ಕತ್ಸಿನಾ ರಾಜ್ಯದ ಮದ್ರಸವೊಂದರಲ್ಲಿ ರವಿವಾರ ನಡೆದ ಧಾರ್ಮಿಕ ಕಾರ್ಯಕ್ರಮವೊಂದರ ವೇಳೆ ಬಂದೂಕುಧಾರಿಗಳ ತಂಡವೊಂದು ನುಗ್ಗಿ 13 ಮಂದಿ ವಿದ್ಯಾರ್ಥಿಗಳನ್ನು ಹತ್ಯೆಗೈದ ಧಾರುಣ ಘಟನೆ ನಡೆದಿದೆ.
ಮುಸಾವಾ ಜಿಲ್ಲೆಯ ಗ್ರಾಮವೊಂದಕ್ಕೆ ರವಿವಾರ ಮೋಟಾರ್ ಸೈಕಲ್ಗಳಲ್ಲಿ ಆಗಮಿಸಿದ ಹಲವಾರು ಢಕಾಯಿತರು, ಧಾರ್ಮಿಕ ಕೇಂದ್ರದಲ್ಲಿ ಮೌಲೂದ್ ಪಾರಾಯಣ ನಡೆಸುತ್ತಿದ್ದ ಶಾಲಾ ಮಕ್ಕಳ ಮೇಲೆ ಗುಂಡು ಹಾರಿಸಿದ್ದಾರೆಂದು ಜಿಲ್ಲಾ ಆಡಳಿತಾಧಿಕಾರಿ ಹಬೀಬ್ ಅಬ್ದುಲ್ ಖಾದಿರ್ ತಿಳಿಸಿದ್ದಾರೆ. ದಾಳಿಯಲ್ಲಿ 13 ಮಂದಿ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ಇತರ 20 ಮಂದಿ ಗಾಯಗೊಂಡಿದ್ದಾರೆಂದು ಅವರು ಹೇಳಿದ್ದಾರೆ.
ಈಶಾನ್ಯ ನೈಜೀರಿಯಾದ ರಾಜ್ಯವಾದ ಕತ್ಸಿನಾ, ಢಕಾಯಿತರ ಹಾವಳಿಗಳಿಂದ ಪೀಡಿತವಾಗಿದೆ. ಈ ರಾಜ್ಯದಲ್ಲಿ ದರೋಡೆಕೋರ ತಂಡಗಳು ಹಳ್ಳಿಗಳ ಮೇಲೆ ದಾಳಿ ನಡೆಸಿ, ನಿವಾಸಿಗಳನ್ನು ಹತ್ಯೆಗೈಯುತ್ತವೆ ಇಲ್ಲವೇ ಅಪಹರಿಸುತ್ತವೆ. ಕೊಳ್ಳೆ ಹೊಡೆದ ಬಳಿಕ ಅವು ಮನೆಗಳಿಗೆ ಬೆಂಕಿ ಹಚ್ಚಿ ಪರಾರಿಯಾಗುತ್ತವೆ.