RJ ಹಾರ್ನೆಕ್ ಸಿಂಗ್ ಹತ್ಯೆಗೆ ಯತ್ನ; ಖಾಲಿಸ್ತಾನ್ ಬೆಂಬಲಿಗರಿಗೆ ಶಿಕ್ಷೆ
Photo: ANI file photo
ವೆಲಿಂಗ್ಟನ್: ಖಾಲಿಸ್ತಾನ್ ಸಿದ್ಧಾಂತವನ್ನು ವಿರೋಧಿಸುತ್ತಿದ್ದ ನ್ಯೂಝಿಲ್ಯಾಂಡ್ನ ಜನಪ್ರಿಯ ರೇಡಿಯೊ ಕಾರ್ಯಕ್ರಮ ನಿರೂಪಕ(ಆರ್ಜೆ) ಹಾರ್ನೆಕ್ ಸಿಂಗ್ ಹತ್ಯೆಗೆ ನಡೆದ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೂವರು ಖಾಲಿಸ್ತಾನ್ ಬೆಂಬಲಿಗರ ಅಪರಾಧ ಸಾಬೀತಾಗಿದೆ ಎಂದು ನ್ಯೂಝಿಲ್ಯಾಂಡ್ ನ ನ್ಯಾಯಾಲಯ ತೀರ್ಪು ನೀಡಿರುವುದಾಗಿ ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ `ದಿ ಆಸ್ಟ್ರೇಲಿಯಾ ಟುಡೆ' ವರದಿ ಮಾಡಿದೆ.
27 ವರ್ಷದ ಸರ್ವಜೀತ್ ಸಿಂಗ್ ಹತ್ಯೆಗೆ ಪ್ರಯತ್ನಿಸಿದ ಆರೋಪಿ, 44 ವರ್ಷದ ಸುಖ್ಪ್ರೀತ್ ಸಿಂಗ್ ಈತನಿಗೆ ನೆರವಾದ ಆರೋಪಿ ಮತ್ತು 48 ವರ್ಷದ `ಸಪ್ರೆಷನ್' ಎಂದು ಅಡ್ಡಹೆಸರಿನಿಂದ ಕರೆಯಲಾಗುವ ವ್ಯಕ್ತಿ ದಾಳಿಯ ಸಂಚು ರೂಪಿಸಿದ ಆರೋಪಿಯೆಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. 2020ರ ಡಿಸೆಂಬರ್ 23ರಂದು ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ಹಾರ್ನೆಕ್ ರನ್ನು ಹಿಂಬಾಲಿಸಿದ ತಂಡವೊಂದು ಕಾರನ್ನು ಅಡ್ಡಗಟ್ಟಿ ಹಾರ್ನೆಕ್ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿತ್ತು. 40ಕ್ಕೂ ಹೆಚ್ಚು ಇರಿತದ ಗಾಯವಾಗಿದ್ದರೂ ಹಾರ್ನೆಕ್ ಕಾರಿನ ಹಾರ್ನ್ ಬಾರಿಸಿದ್ದರಿಂದ ಸ್ಥಳೀಯರು ಧಾವಿಸಿ ಬಂದಾಗ ದಾಳಿಕೋರರು ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಹಾರ್ನೆಕ್ ಹಲವು ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು.