×
Ad

ಪೂರ್ವ ಆಸ್ಟ್ರೇಲಿಯಾ: ಭೀಕರ ಪ್ರವಾಹಕ್ಕೆ 3 ಬಲಿ; ವ್ಯಾಪಕ ನಷ್ಟ

Update: 2025-05-22 22:53 IST

PHOTO : AP

ಮೆಲ್ಬೋರ್ನ್: ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಧಾರಾಕಾರ ಮಳೆಯಿಂದಾಗಿ ಭಾರೀ ಪ್ರವಾಹ, ಭೂಕುಸಿತದಿಂದ ಮೂವರು ಸಾವನ್ನಪ್ಪಿದ್ದು ಒಬ್ಬ ವ್ಯಕ್ತಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಸಿಡ್ನಿಯ ಉತ್ತರದ ನ್ಯೂ ಸೌತ್‍ವೇಲ್ಸ್ ರಾಜ್ಯದಲ್ಲಿ ಮಂಗಳವಾರದಿಂದ ನಿರಂತರ ಮಳೆಯಾಗುತ್ತಿದ್ದು 500ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಪ್ರವಾಹವು 1921 ಮತ್ತು 1929ರಲ್ಲಿ ದಾಖಲಾಗಿದ್ದ ಸ್ಥಳೀಯ ದಾಖಲೆಯನ್ನು ಮೀರಿದೆ.

ನ್ಯೂ ಸೌತ್‍ವೇಲ್ಸ್‌ ನಲ್ಲಿ ಜಲಾವೃತಗೊಂಡ ಮನೆಯಲ್ಲಿದ್ದ 63 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರೆ, ರೋಸ್‍ವುಡ್ ನಗರದಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಬ್ರೂಕ್ಲಾನಾ ಬಳಿ ಕಾರೊಂದು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದು ಕಾರಿನಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್ ಬಳಸಲಾಗಿದ್ದು 500ಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ನ್ಯೂ ಸೌತ್‍ವೇಲ್ಸ್‌ ನ ಟರೀ, ಕೆಂಪ್ಸೆ, ಪೋರ್ಟ್ ಮ್ಯಾಕ್ವಾರಿ, ಕಾಫ್ಸ್ ಬಂದರು ಹಾಗೂ ಬೆಲ್ಲಿಂಗೆನ್ ನಲ್ಲಿ ಪ್ರವಾಹದಿಂದ ಹೆಚ್ಚಿನ ನಾಶ-ನಷ್ಟ ಸಂಭವಿಸಿದ್ದು ಸ್ಥಳಾಂತರಗೊಳ್ಳಲು ಸಿದ್ಧವಾಗಿರುವಂತೆ ಸುಮಾರು 50,000 ಜನರಿಗೆ ಸೂಚಿಸಲಾಗಿದೆ ಎಂದು ತುರ್ತು ಸೇವಾ ಇಲಾಖೆಯ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News