×
Ad

ಅಪರೂಪದ ರಕ್ತದಾನಿ, 24 ಲಕ್ಷ ಶಿಶುಗಳ ಜೀವದಾತ 'ಚಿನ್ನದ ತೋಳಿನ ಮನುಷ್ಯ' ನಿಧನ

Update: 2025-03-04 23:30 IST

Photograph: Australian Red Cross

ಸಿಡ್ನಿ: ಅಪರೂಪದ ರಕ್ತದಾನಿ, 24 ಲಕ್ಷ ಶಿಶುಗಳ ಪಾಲಿನ ಜೀವದಾತ ಎಂದೇ ಖ್ಯಾತರಾಗಿದ್ದ ʼಚಿನ್ನದ ತೋಳಿನ ಮನುಷ್ಯʼ ಆಸ್ಟ್ರೇಲಿಯಾದ ಜೇಮ್ಸ್ ಹ್ಯಾರಿಸನ್ ಅವರು ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು.

ಹ್ಯಾರಿಸನ್ ಅವರ ರಕ್ತವು ವಿಶೇಷವಾಗಿತ್ತು. ಅದು ಆ್ಯಂಟಿ ಡಿ ಚುಚ್ಚುಮದ್ದುಗಳಿಗೆ ಅವಶ್ಯಕವಾಗಿರುವ ಅಪರೂಪದ ಮತ್ತು ಅಮೂಲ್ಯವಾದ ಪ್ರತಿಕಾಯ ಲಕ್ಷಣ ಹೊಂದಿತ್ತು ಎಂದು ಆಸ್ಟ್ರೇಲಿಯನ್ ರೆಡ್ ಕ್ರಾಸ್ ವಿವರಿಸಿದೆ.

ತನ್ನ ಜೀವಿತಾವಧಿಯಲ್ಲಿ, ಹ್ಯಾರಿಸನ್ ತನ್ನ ಪ್ಲಾಸ್ಮಾವನ್ನು ನೀಡಲು 1,100 ಕ್ಕೂ ಹೆಚ್ಚು ಬಾರಿ ತನ್ನ ತೋಳನ್ನು ಒಡ್ಡಿದ್ದರು. ಆ ಮೂಲಕ ಅವರ ಪ್ಲಾಸ್ಮಾವನ್ನು ಅಪಾಯದಲ್ಲಿರುವ 24 ಲಕ್ಷ ನವಜಾತ ಶಿಶುಗಳನ್ನು ಉಳಿಸಲು ಆ್ಯಂಟಿ ಡಿ ಔಷಧಿಗಳ ಡೋಸ್ ಗಳಲ್ಲಿ ಬಳಸಲಾಯಿತು.

ಆ್ಯಂಟಿ-ಡಿ ಇಂಜೆಕ್ಷನ್‌ಗಳು ಆರ್‌ಎಚ್‌ಡಿ-ನೆಗೆಟಿವ್ ಹೊಂದಿರುವ ತಾಯಂದಿರಿಗೆ ನೀಡಲಾಗುವ ಜೀವ ಉಳಿಸುವ ಔಷಧಿಗಳಾಗಿವೆ. ಆರ್‌ಎಚ್‌ಡಿ-ನೆಗೆಟಿವ್ ಹೊಂದಿರುವ ತಾಯಂದಿರ ರಕ್ತವು ಹುಟ್ಟಲಿರುವ ಶಿಶುಗಳ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಂಭವ ಹೆಚ್ಚಿರುತ್ತದೆ. ಈ ರೀತಿಯ ಅಪಾಯಗಳು ಎದುರಾಗಾದ ಆ್ಯಂಟಿ-ಡಿ ಇಂಜೆಕ್ಷನ್‌ಗಳನ್ನು ನೀಡದೇ ಹೋದರೆ, ನವಜಾತ ಶಿಶುಗಳು ಅಥವಾ ಬ್ರೂಣ ಹೆಮೋಲಿಟಿಕ್ ಕಾಯಿಲೆಯಿಂದ (HDFN) ಬಳಲಬಹುದು. ಇದು ಮಕ್ಕಳ ಪಾಲಿಗೆ ಮಾರಕವಾಗಬಹುದು.

ಹ್ಯಾರಿಸನ್ ಮೊದಲು 1954 ರಲ್ಲಿ ರಕ್ತದಾನ ಮಾಡಿದರು. ಅಂದಿನಿಂದ ಅವರು ಪ್ರತೀ 15 ದಿನಗಳಿಗೊಮ್ಮೆ ತಮ್ಮ ಪ್ಲಾಸ್ಮಾ ದಾನ ಮಾಡುತ್ತಿದ್ದರು. ಅವರು ಕೊನೆಯ ಬಾರಿಗೆ ರಕ್ತದಾನ ಮಾಡಿದ್ದು 2018 ರಲ್ಲಿ ಆಗಿತ್ತು, ಆಗ ಅವರಿಗೆ 81 ವರ್ಷ. 14 ವರ್ಷ ವಯಸ್ಸಿನಲ್ಲಿ ಶ್ವಾಸಕೋಶ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಹ್ಯಾರಿಸನ್ ಬದುಕನ್ನು ಬದಲಿಸಿತು. ಆಗ ಅವರೇ ಸ್ವತಃ ಅನೇಕ ರಕ್ತದಾನಿಗಳಿಂದ ರಕ್ತ ಪಡೆದಿದ್ದರು. ಅದು ಅವರಿಗೆ ರಕ್ತದಾನ ಮಾಡಲು ಸ್ಫೂರ್ತಿ ನೀಡಿತು ಎಂದು ರೆಡ್ ಕ್ರಾಸ್ ಹೇಳಿದೆ.

ಹ್ಯಾರಿಸನ್‌ನಂತಹ ಜನರು, ಆ ರೀತಿಯ ರಕ್ತವು ಅಪರೂಪ. ಅವರ ಸೇವೆಯನ್ನು ಗಮನಿಸಿ 1999 ರಲ್ಲಿ ಹ್ಯಾರಿಸನ್‌ಗೆ ಮೆಡಲ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಫೆಬ್ರವರಿ 17 ರಂದು ಹ್ಯಾರಿಸನ್ ನಿಧನರಾದರು ಎಂದು ರೆಡ್‌ಕ್ರಾಸ್ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News