ನೌಕೆಗಳ ಮೇಲೆ ಇರಾನ್‌ನಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ: UAE ಆರೋಪ
Photo Credit : aljazeera.com
ಅಬುಧಾಬಿ, ಆ.19: ಗಲ್ಫ್ ವಲಯದಲ್ಲಿ ಸಂಚರಿಸುತ್ತಿದ್ದ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಯುಎಇ ಆರೋಪಿಸಿದೆ.
ಇರಾನ್‍ನಿಂದ ದೇಶದ ಕಡೆಗೆ ಉಡಾಯಿಸಲಾದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯುಎಇ ವಾಯು ರಕ್ಷಣಾ ವ್ಯವಸ್ಥೆಯು ಪತ್ತೆಹಚ್ಚಿದೆ. ಇದರಲ್ಲಿ ಮೊದಲನೆಯದು ದೇಶದ ಪ್ರಾದೇಶಿಕ ಜಲಪ್ರದೇಶದ ಹೊರಗೆ ಬಿದ್ದರೆ, ಎರಡನೆಯದು ಪ್ರಾದೇಶಿಕ ಜಲಪ್ರದೇಶದ ಒಳಗೆ ಬಿದ್ದಿದೆ. ನಡೆಸಿದ ಪರಿಶೀಲನೆಗಳ ಪ್ರಕಾರ, ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಸಮುದ್ರಯಾನ ಸಂಚಾರವನ್ನು ಗುರಿಯಾಗಿಸಿಕೊಂಡಿದ್ದವು ಎಂದು ಸಚಿವಾಲಯವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಯುಎಇ ಆರೋಪವನ್ನು ಇರಾನ್ ವಿದೇಶಾಂಗ ಸಚಿವಾಲಯ ಸಂಪೂರ್ಣವಾಗಿ ನಿರಾಕರಿಸಿದ್ದು ಇಂತಹ ಹೇಳಿಕೆ ಪ್ರಾದೇಶಿಕ ನಂಬಿಕೆ ಮತ್ತು ಭದ್ರತಾ ಪ್ರಯತ್ನಗಳಿಗೆ ಹಾನಿಕಾರಕ ಎಂದು ಖಂಡಿಸಿದೆ. ಆದರೆ ಅಮೆರಿಕದೊಂದಿಗೆ ಶಾಂತಿ ಒಪ್ಪಂದಕ್ಕೆ ಬರುವವರೆಗೆ, ಯುಎಇ ಬಂದರುಗಳಿಂದ ಹೊರಡುವ ಹಡಗುಗಳು ಗಲ್ಫ್‌ನಿಂದ ನಿರ್ಗಮಿಸಲು ಹಾದುಹೋಗಬೇಕಾದ ಹಾರ್ಮುಝ್ ಜಲಸಂಧಿಯನ್ನು ಮುಚ್ಚಿಡಲಾಗುವುದು ಎಂದು ಇರಾನ್ ಎಚ್ಚರಿಸಿದೆ.
ಈ ಮಧ್ಯೆ, ಪ್ರಾದೇಶಿಕ ಉದ್ವಿಗ್ನತೆಯನ್ನು ಉಲ್ಲೇಖಿಸಿ, ಮಂಗಳವಾರ ತಡರಾತ್ರಿ ಇರಾನ್ ಜೊತೆಗಿನ ಎಲ್ಲಾ ವ್ಯಾಪಾರ ಮತ್ತು ಆರ್ಥಿಕ ವಹಿವಾಟುಗಳನ್ನು ಯುಎಇ ಅಮಾನತುಗೊಳಿಸಿದೆ.