ಇಮ್ರಾನ್ ಖಾನ್‍ರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದ ಆದೇಶ ಪ್ರಶ್ನಿಸಿದ ಪಾಕಿಸ್ತಾನ ಸರಕಾರ
ಇಮ್ರಾನ್ ಖಾನ್ | Photo Credit : PTI
ಇಸ್ಲಮಾಬಾದ್, ಆ.19: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸಂಸ್ಥಾಪಕ ಇಮ್ರಾನ್ ಖಾನ್‍ರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪಾಕಿಸ್ತಾನದ ಫೆಡರಲ್ ಸರಕಾರವು ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ. ಇಸ್ಲಾಮಾಬಾದ್‍ನ ಮುಖ್ಯ ಆಯುಕ್ತರು ಅಡ್ವೊಕೇಟ್ ಜನರಲ್ ಮೂಲಕ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ಖಾನ್‍ರನ್ನು ಅಡಿಯಾಲ ಜೈಲಿನಿಂದ ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಗೆ ಇನ್ನೂ ಸ್ಥಳಾಂತರಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 18 ರಂದು ಹೊರಡಿಸಲಾದ ಮಧ್ಯಂತರ ಆದೇಶವು ಸುಪ್ರೀಂ ಕೋರ್ಟ್‍ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು ವಾದಿಸಿರುವ ಫೆಡರಲ್ ಸರಕಾರ, ಈ ನಿರ್ದೇಶನವನ್ನು ಮರುಪರಿಶೀಲಿಸಿ ರದ್ದುಗೊಳಿಸುವಂತೆ ಕೋರ್ಟ್‍ಗೆ ಮನವಿ ಮಾಡಿದೆ.
ಜೈಲಿನಲ್ಲಿರುವ ಮಾಜಿ ಪ್ರಧಾನಿ ಖಾನ್ ಅವರ ಆರೋಗ್ಯದ ಕುರಿತು ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ, ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಇಸ್ಲಾಮಾಬಾದ್‍ನ ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಗೆ ತಕ್ಷಣವೇ ಸ್ಥಳಾಂತರಿಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಖಾನ್ ಅವರೇ ಭರಿಸಬೇಕೆಂದೂ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ಈ ಮಧ್ಯೆ, ಖಾನ್ ಅವರ ಸಹೋದರಿ ನೊರೀನ್ ನಿಯಾಜಿ ಅವರು ಸುಮಾರು ಒಂಬತ್ತು ತಿಂಗಳ ಬಳಿಕ ಮಂಗಳವಾರ ಅಡಿಯಾಲ ಜೈಲಿನಲ್ಲಿ ಇಮ್ರಾನ್ ಖಾನ್‍ರನ್ನು ಭೇಟಿಯಾಗಿದ್ದಾರೆ. ಇಮ್ರಾನ್ ತಮ್ಮ ಪತ್ನಿ ಬುಷ್ರಾ ಬೀಬಿ ಅವರನ್ನೂ ಭೇಟಿಯಾದರು. ಈ ಭೇಟಿಯು ಸುಮಾರು 30 ರಿಂದ 35 ನಿಮಿಷಗಳ ಕಾಲ ನಡೆಯಿತು ಎಂದು ವರದಿಯಾಗಿದೆ.