×
Ad

ಬಲೂಚಿಸ್ತಾನ: ರಾಜಕೀಯ ರ್‍ಯಾಲಿಯಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ; 11 ಮಂದಿ ಮೃತ್ಯು

Update: 2025-09-03 08:03 IST

PC: x.com/leadersmena

ಕ್ವೆಟ್ಟಾ: ಪಾಕಿಸ್ತಾನದ ಅತೀದೊಡ್ಡ ಪ್ರಾಂತ್ಯ ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ರಾಜಕೀಯ ರ್‍ಯಾಲಿಯೊಂದರ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದು ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ 40ಕ್ಕೂ ಹೆಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಲೂಚಿಸ್ತಾನ ನ್ಯಾಷನಲ್ ಪಾರ್ಟಿ (ಬಿಎನ್‌ಪಿ)ಯ ಸಮಾವೇಶಕ್ಕಾಗಿ ನೂರಾರು ಬೆಂಬಲಿರು ಸೇರಿದ್ದ ಕ್ರೀಡಾಂಗಣದ ಪಾರ್ಕಿಂಗ್ ಜಾಗದಲ್ಲಿ ಈ ದಾಳಿ ನಡೆದಿದೆ. ಹೆಸರು ಹೇಳಲಿಚ್ಚಿಸದ ಇಬ್ಬರು ಪ್ರಾಂತೀಯ ಅಧಿಕಾರಿಗಳು ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದಾರೆ.

ತುರ್ತು ಸೇವೆಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಅಧಿಕಾರಿಗಳು ದಾಳಿ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಬಿಎನ್‌ಪಿ ಸಂಸ್ಥಾಪಕ ಅತ್ತಾವುಲ್ಲಾ ಮೆಂಗಲ್ ಅವರ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ್ದ ರ್‍ಯಾಲಿ ಮುಗಿದು ಸ್ವಲ್ಪವೇ ಹೊತ್ತಿನಲ್ಲಿ ದಾಳಿ ನಡೆದಿದೆ ಎಂದು ಬಿಎನ್‌ಪಿ-ಎಂನ ಹಂಗಾಮಿ ಅಧ್ಯಕ್ಷ, ವಕೀಲ ಸಜೀದ್ ತರೀನ್ ಹೇಳಿದ್ದಾಗಿ ಡಾನ್ ವರದಿ ಮಾಡಿದೆ.

ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ತಲುಪಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಲೂಚಿಸ್ತಾನ ಗೃಹ ಇಲಾಖೆ ದೃಢಪಡಿಸಿದೆ. ಭದ್ರತಾ ಪಡೆಗಳು ಧಾವಿಸಿ ಇಡೀ ಸ್ಥಳವನ್ನು ಸುತ್ತುವರಿದಿದ್ದು, ಪುರಾವೆಯನ್ನು ಸಂಗ್ರಹಿಸುವ ಕಾರ್ಯ ಆರಂಭಿಸಿದೆ.

ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಝ್ ಬುಗ್ಟಿ ದಾಳಿಯನ್ನು ಬಲವಾಗಿ ಖಂಡಿಸಿದ್ದು, ಇದು ಮಾನವತೆಯ ಮೇಲೆ ನಡೆದ ವಿರೋಧಿಗಳ ಹೇಯ ಕೃತ್ಯ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News