ಬಾಂಗ್ಲಾದೇಶದ ವಾಯುನೆಲೆ ಮೇಲೆ ದಾಳಿ: ಒಬ್ಬ ಮೃತ್ಯು; ಹಲವರಿಗೆ ಗಾಯ
Photo Credit | AP FILE
ಢಾಕಾ: ಬಾಂಗ್ಲಾದೇಶದ ಕಾಕ್ಸ್ ಬಝಾರ್ ಜಿಲ್ಲೆಯಲ್ಲಿನ ವಾಯುಪಡೆಯ ಮೇಲೆ ಸೋಮವಾರ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಒಬ್ಬ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗುಂಡೇಟಿನಿಂದ ಮೃತಪಟ್ಟವರನ್ನು ಸ್ಥಳೀಯ ವ್ಯಾಪಾರಿ ಶಿಹಾಬ್ ಕಬೀರ್ ಎಂದು ಗುರುತಿಸಲಾಗಿದೆ.
ವಾಯುನೆಲೆಗೆ ಹೊಂದಿಕೊಂಡಿರುವ ಜಮೀನಿಗೆ ಸಂಬಂಧಿಸಿ ಸ್ಥಳೀಯರು ಹಾಗೂ ವಾಯುಪಡೆ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಸ್ಥಳೀಯರು ವಾಯುಪಡೆ ಸಿಬ್ಬಂದಿಯತ್ತ ಕಲ್ಲೆಸೆದಾಗ ವಾಯುಪಡೆ ಸಿಬ್ಬಂದಿಯೂ ಪ್ರತಿಕ್ರಿಯಿಸಿದರು. ಆಗ ಘರ್ಷಣೆ ಹಿಂಸಾಚಾರದ ರೂಪಕ್ಕೆ ತಿರುಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ `ಢಾಕಾ ಟ್ರಿಬ್ಯೂನ್' ವರದಿ ಮಾಡಿದೆ. ಹಿಂಸಾಚಾರದಲ್ಲಿ ಒಬ್ಬ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ರವಾನಿಸಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ. ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ.