ಬಾಂಗ್ಲಾದೇಶ: ಮಧ್ಯಂತರ ಸರಕಾರಕ್ಕೆ ವಿದ್ಯಾರ್ಥಿ ನಾಯಕ ರಾಜೀನಾಮೆ
Photo Credit | India Today
ಢಾಕ: ಕಳೆದ ವರ್ಷ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಗೆ ಕಾರಣವಾದ ದಂಗೆಯ ನೇತೃತ್ವ ವಹಿಸಿದ್ದ ಪ್ರಮುಖ ವಿದ್ಯಾರ್ಥಿ ಗುಂಪಿನ ನಾಯಕ ನಹೀದ್ ಇಸ್ಲಾಮ್ ಮಧ್ಯಂತರ ಸರಕಾರಕ್ಕೆ ರಾಜೀನಾಮೆ ನೀಡಿದ್ದು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
`ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ 2024ರಲ್ಲಿ ಶೇಖ್ ಹಸೀನಾ ಸರಕಾರದ ವಿರುದ್ಧದ ದಂಗೆಯನ್ನು ಪ್ರತಿನಿಧಿಸುತ್ತಾರೆ, ರಾಜಕೀಯ ಪಕ್ಷವನ್ನಲ್ಲ. ದೇಶದಲ್ಲಿರುವ ರಾಜಕೀಯ ಪಕ್ಷಗಳ ಸಿದ್ಧಾಂತಗಳು ದೇಶದ ಎಲ್ಲಾ ಜನತೆಯನ್ನು ಪ್ರತಿನಿಧಿಸುವುದಿಲ್ಲ . ಈ ಹಿನ್ನೆಲೆಯಲ್ಲಿ ಹೊಸ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುವ ಗುರಿಯನ್ನು ಹೊಂದಿರುವ ಹೊಸ ರಾಜಕೀಯ ಪಕ್ಷಕ್ಕೆ ಫೆಬ್ರವರಿ 28ರಂದು ಢಾಕಾದಲ್ಲಿ ಸಂಸದೀಯ ಭವನದ ದಕ್ಷಿಣದಲ್ಲಿರುವ ಮಾಣಿಕ್ ಮಿಯಾ ಅವೆನ್ಯೂವಿನಲ್ಲಿ ಅದ್ದೂರಿ ರ್ಯಾಲಿಯ ಮೂಲಕ ಚಾಲನೆ ನೀಡಲಾಗುವುದು' ಎಂದವರು ಹೇಳಿದ್ದಾರೆ.
` ಜುಲೈ 2024ರ ದಂಗೆಯ ನಂತರ ಬಾಂಗ್ಲಾದೇಶದಲ್ಲಿ ಹೊಸ ಭರವಸೆಗಳು ಮತ್ತು ನಿರೀಕ್ಷೆಗಳು ಜನಿಸಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೊಸ ರಾಜಕೀಯ ಪಕ್ಷವನ್ನು ರಚಿಸಲು ಮುಂದಾಗಿದ್ದಾರೆ. ಮಧ್ಯಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಹಾಗೂ ಎಲ್ಲಾ ಸಲಹೆಗಾರರು ದಂಗೆಯನ್ನು ಪ್ರತಿನಿಧಿಸುತ್ತಾರೆ. ಯಾವುದೇ ರಾಜಕೀಯ ಪಕ್ಷವನ್ನಲ್ಲ' ಎಂದು ವಿದ್ಯಾರ್ಥಿಗಳ ಗುಂಪಿನ ವೇದಿಕೆ `ಜಾಟಿಯೊ ನಾಗೊರಿಕ್ ಕಮಿಟಿ'ಯ ವಕ್ತಾರೆ ಸಮಂತಾ ಶೆರ್ಮೀನ್ ಹೇಳಿದ್ದಾರೆ.