ಬಾಂಗ್ಲಾ: ಡಿಸೆಂಬರ್‍ನೊಳಗೆ ಚುನಾವಣೆ ನಡೆಸಲು ಬಿ ಎನ್ ಪಿ ಆಗ್ರಹ
PC: x.com/firstpost
ಢಾಕ: ದೇಶದಲ್ಲಿ ಡಿಸೆಂಬರ್‍ನೊಳಗೆ ಚುನಾವಣೆ ನಡೆಸುವಂತೆ ಮತ್ತು `ವಿವಾದಾತ್ಮಕ ಸಲಹೆಗಾರರನ್ನು' ತೆಗೆದುಹಾಕುವ ಮೂಲಕ ಕ್ಯಾಬಿನೆಟ್ ಪುನರ್‍ರಚಿಸುವಂತೆ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‍ಪಿ) ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್‍ರನ್ನು ಒತ್ತಾಯಿಸಿದೆ.
`ಸುಧಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಡಿಸೆಂಬರ್‍ನೊಳಗೆ ರಾಷ್ಟ್ರೀಯ ಚುನಾವಣೆ ನಡೆಸಲು ಆಗ್ರಹಿಸಿದ್ದೇವೆ ಎಂದು ಬಿಎನ್‍ಪಿಯ ನಾಯಕ ಮುಶ್ರಫ್ ಹೊಸೇನ್ ಹೇಳಿದ್ದಾರೆ. ಅವರ ನೇತೃತ್ವದ ಬಿಎನ್‍ಪಿ ನಿಯೋಗ ಶನಿವಾರ ಮುಹಮ್ಮದ್ ಯೂನುಸ್‍ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಚುನಾವಣೆ ನಡೆಸಲು ಮಾರ್ಗಸೂಚಿಯನ್ನು ಘೋಷಿಸುವಂತೆ ಆಗ್ರಹಿಸಿರುವುದಾಗಿ ವರದಿಯಾಗಿದೆ.
ಎಲ್ಲಾ ಮೂರು ಪ್ರಮುಖ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು ಮಧ್ಯಂತರ ಸರ್ಕಾರದ ನೇತೃತ್ವದಡಿ ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ರೀತಿಯಲ್ಲಿ ಚುನಾವಣೆ ನಡೆಸಲು ಮೂರೂ ಪಕ್ಷಗಳು ಬೆಂಬಲ ಘೋಷಿಸಿವೆ. ಡಿಸೆಂಬರ್‍ನಿಂದ ಮುಂದಿನ ವರ್ಷದ ಜೂನ್ ನಡುವೆ ಚುನಾವಣೆ ನಡೆಸುವುದಾಗಿ ಯೂನುಸ್ ಹೇಳಿದ್ದು ಇದಕ್ಕೆ ಜಮಾತ್ ಮತ್ತು ಎನ್‍ಸಿಪಿ ಪಕ್ಷ ಬೆಂಬಲ ಸೂಚಿಸಿದೆ. ಎರಡು ಗಂಟೆಗಳ ಸುದೀರ್ಘ ಸಭೆಯಲ್ಲಿ ಮಧ್ಯಂತರ ಸರಕಾರಕ್ಕೆ ವಹಿಸಿಕೊಟ್ಟ ಮೂರು ಪ್ರಾಥಮಿಕ ಜವಾಬ್ದಾರಿಗಳು- ಚುನಾವಣೆ, ಸುಧಾರಣೆ ಮತ್ತು ನ್ಯಾಯ ಕುರಿತು ವಿವರವಾದ ಚರ್ಚೆ ನಡೆದಿದೆ ಎಂದು ಯೂನುಸ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ.