×
Ad

ಬಾಂಗ್ಲಾದೇಶ: ಬಂಡುಗೋರ ಪಡೆಯ ಮುಖಂಡನ ಬಂಧನ

Update: 2024-04-08 22:47 IST

ಸಾಂದರ್ಭಿಕ ಚಿತ್ರ

ಢಾಕ: ಬಾಂಗ್ಲಾದೇಶದ `ಕುಕಿ-ಚಿನ್ ನ್ಯಾಷನಲ್ ಫ್ರಂಟ್(ಕೆಎನ್‍ಎಫ್)' ಬುಡಕಟ್ಟು ಬಂಡುಗೋರ ಗುಂಪಿನ ಮುಖಂಡ ಚಿಯೊಸಿಮ್ ಬೋಮ್‍ನನ್ನು ರವಿವಾರ ಭದ್ರತಾ ಪಡೆಗಳು ಬಂಧಿಸಿರುವುದಾಗಿ ವರದಿಯಾಗಿದೆ.

ಸೇನಾಡಳಿತದ ವಿರುದ್ಧ ಬಂಡೆದ್ದಿರುವ ಕೆಎನ್‍ಎಫ್ ಇತ್ತೀಚೆಗೆ ಆಗ್ನೇಯ ಪ್ರಾಂತದಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕನ್ನು ಲೂಟಿ ಮಾಡಿತ್ತು ಮತ್ತು ಬ್ಯಾಂಕ್‍ನ ಮ್ಯಾನೇಜರ್ ನನ್ನು ಅಪಹರಿಸಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ` ರ‍್ಯಾಪಿಡ್ ಆ್ಯಕ್ಷನ್ ಬಟಾಲಿಯನ್(ಆರ್‍ಎಬಿ), ಬಂದರ್‍ಬನ್ ನಗರದ ಹೊರವಲಯದಲ್ಲಿ ಮನೆಯೊಂದರ ಕಪಾಟಿನಲ್ಲಿ ಅವಿತು ಕುಳಿತಿದ್ದ ಚಿಯೊಸಿಮ್ ಬೋಮ್‍ನನ್ನು ಬಂಧಿಸಿದೆ . ಕೆಎನ್‍ಎಫ್ ಹಾಗೂ ಐಸಿಸ್ ನಡುವೆ ಸಂಪರ್ಕ ಇರುವ ಸಾಧ್ಯತೆಯಿದ್ದು ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಆರ್‍ಎಬಿಯ ಪ್ರಾದೇಶಿಕ ಕಮಾಂಡರ್ ಲೆ|ಕ| ಎಚ್.ಎಂ. ಸಜ್ಜದ್ ಮಾಹಿತಿ ನೀಡಿದ್ದಾರೆ.

ಭೂಗತನಾಗಿರುವ ಕೆಎನ್‍ಎಫ್ ಮುಖಂಡ ನಥಾನ್ ಬೋಮ್‍ನ ನಿಕಟವರ್ತಿಯಾಗಿರುವ ಚೆಯೊಸಿಮ್, ಕೆಎನ್‍ಎಫ್‍ನ ಉನ್ನತ ಕಮಾಂಡರ್ ಆಗಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಕೆಎನ್‍ಎಫ್‍ನ ಇತರ ಕೆಲವು ಸದಸ್ಯರನ್ನೂ ಬಂಧಿಸಿ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದವರು ಹೇಳಿದ್ದಾರೆ.

ಸೇನಾಡಳಿತದ ವಿರುದ್ಧ ಬಂಡೆದ್ದಿರುವ ಕೆಎನ್‍ಎಫ್ ಗುಂಪನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬಂದರ್‍ಬನ್‍ನ ಸ್ವಾಯತ್ತ ಗುಡ್ಡಗಾಡು ಜಿಲ್ಲಾ ಸಮಿತಿಯ ಮುಖ್ಯಸ್ಥ ಕ್ಯಶಾಯಿ ಹಿಲಾ ನೇತೃತ್ವದಲ್ಲಿ ಕಳೆದ ವರ್ಷ ಪ್ರಯತ್ನ ಆರಂಭಗೊಂಡಿತ್ತು. ಆದರೆ ಕೆಎನ್‍ಎಫ್ ಮತ್ತೆ ಹಿಂಸಾತ್ಮಕ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದು ಬ್ಯಾಂಕ್ ಲೂಟಿ, ಸರಕಾರಿ ಸಿಬಂದಿಗಳ ಅಪಹರಣ, ಭದ್ರತಾ ಯೋಧರ ಮೇಲೆ ಆಕ್ರಮಣ ನಡೆಸಿ ಶಸ್ತ್ರಾಸ್ತ್ರ ಅಪಹರಿಸುವುದು ಇತ್ಯಾದಿ ಕಾರ್ಯ ಮುಂದುವರಿಸಿದ್ದರಿಂದ ಸಂಧಾನ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News