×
Ad

ಬಾಂಗ್ಲಾದೇಶ: ಶೇಖ್ ಹಸೀನಾ ಪಲಾಯನದ ಬಳಿಕವೂ ನಿಲ್ಲದ ಹಿಂಸಾಚಾರ; 232 ಮಂದಿ ಹತ್ಯೆ

Update: 2024-08-10 08:32 IST

PC: x.com/Sunny_000S

ಢಾಕಾ: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಮತ್ತು ಭಾರತಕ್ಕೆ ಪಲಾಯನದ ಬಳಿಕವೂ ಪುಟ್ಟ ದೇಶದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಕಳೆದ ಮೂರು ದಿನಗಳಲ್ಲಿ ಸಂಘರ್ಷದಿಂದ ಮೃತಪಟ್ಟವರ ಸಂಖ್ಯೆ 232ಕ್ಕೇರಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ತೀವ್ರ ಸ್ವರೂಪದ ಹಾಗೂ ರಕ್ತಸಿಕ್ತ ಸರ್ಕಾರಿ ವಿರೋಧಿ ಹೋರಾಟ ಕಳೆದ ಮೂರು ವಾರಗಳಿಂದ ನಡೆಯುತ್ತಿದ್ದು, ಇದು ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾಗಿದೆ. ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಮೊಹ್ಮದ್ ಯೂನೂಸ್ ನೇತೃತ್ವದ ಮಧ್ಯಂತರ ಸರ್ಕಾರ ರಚನೆಯಾಗಿದೆ. ಬಾಂಗ್ಲಾ ಹಿಂಸಾಚಾರದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 469ಕ್ಕೇರಿದೆ ಎಂದು ಸುದ್ದಿಸಂಸ್ಥೆ ಹೇಳಿದೆ.

ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಯುತ್ತಿದ್ದು, ಹತಾಶರಾದ ಬಾಂಗ್ಲಾದೇಶಿಗಳು ಅಕ್ರಮವಾಗಿ ಭಾರತದ ಗಡಿಯೊಳಕ್ಕೆ ನುಸುಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮಂಗಳವಾರ ಬಹುತೇಕ ಸಾವು ಸಂಭವಿಸಿದ್ದು, ಮತ್ತೆ ಕೆಲವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗಳಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಡೈಲಿ ಪ್ರೊಟೋಮ್ ಅಲೊ ವರದಿ ಮಾಡಿದೆ.

ಈ ಮಧ್ಯೆ ಶೇಖ್ ಹಸೀನಾ ದೇಶದಲ್ಲಿ ಕ್ರಿಮಿನಲ್ ಆರೋಪವನ್ನು ಎದುರಿಸಬೇಕು ಎಂದು ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಆಗ್ರಹಿಸಿದೆ. ಮಾಜಿ ನಾಯಕಿಗೆ ಭಾರತ ಆಶ್ರಯ ನೀಡಿದರೆ, ಭಾರತದ ಜತೆಗಿನ ಸಂಬಂಧಕ್ಕೆ ಧಕ್ಕೆಯಾಗುವ ಅಪಾಯವಿದೆ ಎಂದು ಎಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News