ಕನ್ನಡಕ್ಕೆ 'ಬೂಕರ್ʼ ಗರಿ ಕೊಟ್ಟ ಬಾನು ಮುಷ್ತಾಕ್
ಲಂಡನ್ ನಲ್ಲಿ ನಡೆದ ಬೂಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯೊಂದಿಗೆ ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರ ಸಂಭ್ರಮ | Photo : AP
ಬೆಂಗಳೂರು: 2022ರ ಬಳಿಕ ಭಾರತಕ್ಕೆ ಮತ್ತೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿದೆ. ಈ ಬಾರಿ ಕನ್ನಡದ ಹೆಮ್ಮಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಈ ʼಬೂಕರ್ʼ ಗೌರವ ಸಂದಿರುವುದು ಭಾರತೀಯರಿಗೆ, ವಿಶೇಷವಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಹೆಮ್ಮೆಯ ವಿಚಾರ.
2022ರಲ್ಲಿ ಹಿಂದಿ ಸಾಹಿತಿ ಗೀತಾಂಜಲಿ ಶ್ರೀ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿತ್ತು. ಅವರ ಹಿಂದಿ ಕೃತಿ ' ರೇತ್ ಸಮಾಧಿ' ಯ ಇಂಗ್ಲೀಷ್ ಅನುವಾದ "Tomb of Sand" ಗೆ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿ ಬಂದಿತ್ತು. ಅದಕ್ಕಿಂತ ಹಿಂದೆ 2008ರಲ್ಲಿ ಕನ್ನಡಿಗ ಅರವಿಂದ ಅಡಿಗ ಅವರ 'ದಿ ವೈಟ್ ಟೈಗರ್' ಆಂಗ್ಲ ಕೃತಿಗೆ ಬೂಕರ್ ಪ್ರಶಸ್ತಿ ನೀಡಲಾಗಿತ್ತು.
ಇದಲ್ಲದೆ ಭಾರತೀಯ ಮೂಲದ ವಿ.ಎಸ್. ನೈಪಾಲ್ ಹಾಗೂ ಸಲ್ಮಾನ್ ರಶ್ದಿ ಮತ್ತು ಭಾರತೀಯ ಸಾಹಿತಿಗಳ ಪೈಕಿ ಅರುಂಧತಿ ರಾಯ್ ಹಾಗು ಕಿರಣ್ ದೇಸಾಯಿ ಅವರು ವಿಶ್ವವಿಖ್ಯಾತ ಬೂಕರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಭಾರತೀಯ ಪೋಷಕರಿಗೆ ಟ್ರಿನಿಡಾಡ್‌ನಲ್ಲಿ ಜನಿಸಿದ ವಿ.ಎಸ್. ನೈಪಾಲ್ ಅವರು 1971 ರಲ್ಲಿ ತಮ್ಮ 'ಇನ್ ಎ ಫ್ರೀ ಸ್ಟೇಟ್' ಕೃತಿಗಾಗಿ ಬೂಕರ್ ಪ್ರಶಸ್ತಿ ಗೆದ್ದರು. ಭಾರತದಲ್ಲಿ ಜನಿಸಿದ ಬ್ರಿಟಿಷ್ ಅಮೇರಿಕನ್ ಪೌರರಾದ ಸಲ್ಮಾನ್ ರಶ್ದಿ ಅವರು ತಮ್ಮ 'ಮಿಡ್ನೈಟ್ಸ್ ಚಿಲ್ಡ್ರನ್' ಕೃತಿಗೆ 1981 ರಲ್ಲಿ ಬೂಕರ್ ಪ್ರಶಸ್ತಿ ಪಡೆದರು; ಈ ಕೃತಿ 'ಬೂಕರ್ ಆಫ್ ಬೂಕರ್ಸ್' ಗೌರವಕ್ಕೂ ಪಾತ್ರವಾಗಿದೆ.
ನಂತರ, ಅರುಂಧತಿ ರಾಯ್ ಅವರು ತಮ್ಮ ಚೊಚ್ಚಲ ಕಾದಂಬರಿ 'ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಗಾಗಿ 1997 ರಲ್ಲಿ ಬೂಕರ್ ಪ್ರಶಸ್ತಿ ಪಡೆದರು, ಈ ಕೃತಿಯು ಕೇರಳದ ಸಾಮಾಜಿಕ ಮತ್ತು ಕೌಟುಂಬಿಕ ಜೀವನವನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಈ ಮೂಲಕ ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಪ್ರಜೆ ಎಂಬ ಗೌರವಕ್ಕೆ ಪಾತ್ರರಾದರು.
ಕಿರಣ್ ದೇಸಾಯಿ ಅವರು 2006 ರಲ್ಲಿ ತಮ್ಮ 'ದಿ ಇನ್ಹೆರಿಟೆನ್ಸ್ ಆಫ್ ಲಾಸ್' ಕಾದಂಬರಿಗಾಗಿ ಬೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು, ಇದು ಜಾಗತೀಕರಣ ಮತ್ತು ವಲಸೆಯಂತಹ ವಿಷಯಗಳನ್ನು ಪರಿಶೀಲಿಸುತ್ತದೆ.
2008ರಲ್ಲಿ ಕರ್ನಾಟಕದ ಮಂಗಳೂರು ಮೂಲದ ಡಾ ಕೆ ಮಾಧವ ಅಡಿಗ ಹಾಗು ಉಷಾ ಅಡಿಗ ಅವರ ಪುತ್ರ ಅರವಿಂದ ಅಡಿಗ ಅವರು ತಮ್ಮ ಆಂಗ್ಲ ಕೃತಿಗಾಗಿ ಬೂಕರ್ ಪ್ರಶಸ್ತಿ ಪಡೆದರು. ಅರವಿಂದ್ ಅವರ ಅಜ್ಜ ಕೆ ಸೂರ್ಯನಾರಾಯಣ ಅಡಿಗ ಅವರು ಕರ್ನಾಟಕ ಬ್ಯಾಂಕ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರಿನ ಕೆನರಾ ಹೈಸ್ಕೂಲ್ ಹಾಗು ಅಲೋಶಿಯಸ್ ಕಾಲೇಜಿನಲ್ಲಿ ಕಲಿತ ಬಳಿಕ ಅರವಿಂದ್ ಅವರ ಕುಟುಂಬ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿತ್ತು.
ಬಾನು ಮುಷ್ತಾಕ್ ಅವರು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಹುಟ್ಟಿ ಬೆಳೆದವರು. ಅರವಿಂದ್ ಅಡಿಗ ಅವರು ಬೂಕರ್ ಪ್ರಶಸ್ತಿ ಪಡೆದಿದ್ದರೆ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದಿದ್ದಾರೆ. ಬೂಕರ್ ಅಥವಾ ಮ್ಯಾನ್ ಬೂಕರ್ ಪ್ರಶಸ್ತಿ ಆಂಗ್ಲ ಕೃತಿಗಳಿಗೆ ಕೊಡುವ ಪ್ರಶಸ್ತಿ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬೇರೆ ಭಾಷೆಗಳಿಂದ ಇಂಗ್ಲೀಷ್ ಗೆ ಅನುವಾದ ಆದ ಕೃತಿಗಳಿಗೆ ಕೊಡುವ ಪ್ರಶಸ್ತಿ.
ಬಾಲ್ಯದಲ್ಲಿ ಉರ್ದು ಶಾಲೆಯಲ್ಲಿ ಸೇರಿದ್ದರೂ, ಬಾನು ಮುಶ್ತಾಕ್ ಅವರು ಕನ್ನಡ ಕಲಿಕೆಗೆ ಹೆಚ್ಚು ಆಸಕ್ತಿ ತೋರಿಸಿದರು.
ಅವರ ತಂದೆ ಹೆಲ್ತ್ ಇನ್ಸ್ಪೆಕ್ಟರ್ ಸರಕಾರಿ ಹುದ್ದೆಯಲ್ಲಿ ಇದ್ದರು. ತಂದೆಯ ವರ್ಗಾವಣೆಯೊಂದಿಗೆ ಶಿವಮೊಗ್ಗಕ್ಕೆ ತೆರಳಿದರು. ಅಲ್ಲಿನ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಯಲ್ಲಿ ಪ್ರವೇಶ ಪಡದು, ಆರು ತಿಂಗಳಲ್ಲಿ ಕನ್ನಡ ಭಾಷೆಯನ್ನು ಕಲಿತರು. ವಿದ್ಯಾಭ್ಯಾಸದ ಅವಧಿಯಲ್ಲಿ ಅವರು ಸಮಾಜದ ವಿರೋಧಾಭಾಸಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಮುಸ್ಲಿಂ ಸಮುದಾಯದ ಹುಡುಗಿಯರ ಬಾಲ್ಯವಿವಾಹ, ಮಹಿಳೆಯರ ಬದುಕು, ವ್ಯಕ್ತಿತ್ವ, ಸಂಕಷ್ಟ – ಇವುಗಳೆಲ್ಲಾ ಅವರ ಕಥೆಗಳಲ್ಲಿ ಪಾತ್ರಗಳಾಗದವು. ಬಿಎಸ್‌ಸಿ ಮತ್ತು ಎಲ್‌ಎಲ್‌ಬಿ ಪದವೀಧರರಾಗಿದ್ದ ಬಾನು ಮುಷ್ತಾಕ್ ಅವರು, ತಮ್ಮ ವೃತ್ತಿಜೀವನದಲ್ಲಿ ಶಿಕ್ಷಕಿಯಾಗಿ ಪಾಠ ಕಲಿಸಿಸಿದರು.ನ್ಯಾಯವಾದಿಯಾಗಿ ಕಕ್ಷಿದಾರರ ಪರ ವಾದಿಸಿದರು. ದಿಟ್ಟ ಪತ್ರಕರ್ತೆಯಾಗಿ ಸುದ್ದಿ, ವರದಿಗಳನ್ನು ಬರೆದರು. ಸಮಾಜದ ಭಾವನೆಗಳಿಗೆ ಕಿವಿಯಾದರು, ಕಣ್ಣಾದರು, ಧ್ವನಿಯಾದರು.
ವಿಜಯಪುರ ಜಿಲ್ಲೆಯಲ್ಲಿ ಮುಸ್ಲಿಂ ಹುಡುಗಿಯೊಬ್ಬಳ ವಿರುದ್ಧ ಫತ್ವಾ ಹೊರಡಿಸಿದ ಸಂದರ್ಭದಲ್ಲಿ ಬರೆದ ಲೇಖನದಿಂದ ಅವರ ಪತ್ರಿಕೋದ್ಯಮ ವೃತ್ತಿ ಪ್ರಾರಂಭವಾಯಿತು. ಆ ಲೇಖನ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಬಾನು ಮುಷ್ತಾಕ್ ಅವರು ಕಾದಂಬರಿ, ಕಥಾ ಸಂಕಲನ, ಪ್ರಬಂಧ, ಕವನ, ಅನುವಾದ ಮುಂತಾದ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ‘ಎದೆಯ ಹಣತೆʼ, ʼಹೆಜ್ಜೆ ಮೂಡಿದ ಹಾದಿʼ, ʼಬೆಂಕಿ ಮಳೆʼ, ʼಸಫೀರಾʼ, ʼಬಡವರ ಮಗಳು ಹೆಣ್ಣಲ್ಲʼ, ‘ಕುಬ್ರ’ ಮೊದಲಾದ ಕಥಾಸಂಕಲನಗಳು ಮಾತ್ರವಲ್ಲದೇ, ʼಒದ್ದೆ ಕಣ್ಣಿನ ಬಾಗಿನʼ ಎಂಬ ಕವನ ಸಂಕಲನ, ʼಇಬ್ಬನಿಯ ಕಾವುʼ, ʼಹೂ ʼಕಣಿವೆಯ ಚಾರಣʼ ಲೇಖನ ಸಂಕಲನಗಳು ಪ್ರಸಿದ್ಧವಾಗಿವೆ.
ಫಾರ್ಸಿ ಮೂಲದ ಇತಿಹಾಸ ಗ್ರಂಥ ʼತಾರೀಖ್ -ಎ-ಫೆರಿಸ್ತಾʼವನ್ನು ಉರ್ದು ಭಾಷೆಯಿಂದ ಕನ್ನಡಕ್ಕೆ ಅವರು ಅನುವಾದಿಸಿದ್ದಾರೆ.
ʼಕರಿನಾಗರಗಳುʼ ಎಂಬ ಅವರ ಕಥೆಯನ್ನು ಆಧರಿಸಿ, ಗಿರೀಶ್ ಕಾಸರವಳ್ಳಿ ನಿರ್ದೇಶಿಸಿರುವ ʼಹಸೀನಾʼ ಚಿತ್ರಕ್ಕೆ ಮೂರು ರಾಷ್ಟ್ರ ಪ್ರಶಸ್ತಿಗಳು ಲಭಿಸಿದ್ದವು.
ಬಾನು ಮುಷ್ತಾಕ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪದ್ಮಭೂಷಣ ಬಿ.ಸರೋಜದೇವಿ ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಗೌರವ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ಲಭಿಸಿವೆ.