×
Ad

ತುರ್ತು ಪರಿಸ್ಥಿತಿಗೆ ಸಿದ್ಧವಾಗಿರಿ: ಮ್ಯಾನ್ಮಾರ್ ಸೇನಾಡಳಿತ ಸೂಚನೆ

Update: 2023-11-16 22:06 IST

ಸಾಂದರ್ಭಿಕ ಚಿತ್ರ | Photo: NDTV 

ಯಾಂಗಾನ್: ದೇಶದ ಹಲವೆಡೆ ಬಂಡುಕೋರರಿಂದ ಭಾರೀ ದಾಳಿ ಎದುರಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಸರಕಾರಿ ಸಿಬಂದಿಗಳು ಹಾಗೂ ಮಿಲಿಟರಿ ಅನುಭವ ಹೊಂದಿರುವವರು ತುರ್ತು ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸಲು ಸಿದ್ಧವಾಗಿರುವಂತೆ ಮ್ಯಾನ್ಮಾರ್ ನ ಸೇನಾಡಳಿತ ಸೂಚಿಸಿದೆ ಎಂದು ಉನ್ನತ ಮೂಲಗಳು ವರದಿ ಮಾಡಿವೆ.

ಈಶಾನ್ಯದಲ್ಲಿ ಶಾನ್ ರಾಜ್ಯ, ಪೂರ್ವದಲ್ಲಿ ಕಯಾಹ್ ರಾಜ್ಯ ಮತ್ತು ಪಶ್ಚಿಮದಲ್ಲಿ ರಾಖೈನ್ ರಾಜ್ಯದಲ್ಲಿ ಮಿಲಿಟರಿಯು `ಗಣನೀಯ ಸಂಖ್ಯೆಯ ಸಶಸ್ತ್ರ ಬಂಡುಗೋರ ಪಡೆಯಿಂದ ಭಾರೀ ಆಕ್ರಮಣಗಳನ್ನು ಎದುರಿಸುತ್ತಿದೆ. ಬಂಡುಗೋರರು ಮಿಲಿಟರಿ ನೆಲೆಗಳ ಮೇಲೆ ಡ್ರೋನ್ ಬಳಸಿ ಬಾಂಬ್ ದಾಳಿ ನಡೆಸುತ್ತಿದ್ದು ಹಲವು ಮಿಲಿಟರಿ ನೆಲೆಗಳನ್ನು ತೆರವುಗೊಳಿಸಲಾಗಿದೆ. ಇದೀಗ ಬಂಡುಗೋರರ ದಾಳಿಯಿಂದ ನಮ್ಮ ಸೇನಾನೆಲೆಗಳನ್ನು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಬುಧವಾರ ಸೇನಾಡಳಿತದ ವಕ್ತಾರ ಝಾವ್ ಮಿನ್‍ಟುನ್ ಹೇಳಿದ್ದರು.

ಹಲವು ದಶಕಗಳಿಂದಲೂ ಮ್ಯಾನ್ಮಾರ್ ಸೇನೆ ಬಂಡುಗೋರರ ವಿರುದ್ಧ ಹೋರಾಡುತ್ತಿದೆ. ಆದರೆ 2021ರಲ್ಲಿ ಕ್ಷಿಪ್ರ ದಂಗೆಯ ಮೂಲಕ ಚುನಾಯಿತ ಸರಕಾರವನ್ನು ಪದಚ್ಯುತಗೊಳಿಸಿ ಸೇನೆಯು ಅಧಿಕಾರ ವಶಪಡಿಸಿಕೊಂಡ ಬಳಿಕ ಬಂಡುಗೋರ ಚಟುವಟಿಕೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸಲು ಘಟಕವನ್ನು ರಚಿಸಲು ಎಲ್ಲಾ ಸರಕಾರಿ ಸಿಬಂದಿ ಹಾಗೂ ನಿವೃತ್ತ ಮಿಲಿಟರಿ ಸಿಬಂದಿಗೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದಲ್ಲಿ ಅಂತಹ ಘಟಕವು ನೈಸರ್ಗಿಕ ವಿಕೋಪ ಮತ್ತು ಭದ್ರತೆಗಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ರಾಜಧಾನಿಯಲ್ಲಿ ಈಗ ಪರಿಸ್ಥಿತಿ ಶಾಂತವಾಗಿದೆ, ಆದರೆ ಅಗತ್ಯಬಿದ್ದಲ್ಲಿ ನೆರವು ಪಡೆಯಲು ಈ ಘಟಕ ರಚಿಸಲಾಗುತ್ತಿದೆ ಎಂದು ಆಡಳಿತ ಸಮಿತಿಯ ಕಾರ್ಯದರ್ಶಿ ಟಿನ್ ಮಾಂಗ್ ಸ್ವೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News