ಬೈಡನ್ ಪುತ್ರನ ವಿರುದ್ಧ ತೆರಿಗೆ ವಂಚನೆ ಆರೋಪ
ಹಂಟರ್ ಬೈಡನ್ | Photo: PTI
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಪುತ್ರ ಹಂಟರ್ ಬೈಡನ್ ತೆರಿಗೆ ವಂಚಿಸಿ ಗೆಳೆಯರೊಂದಿಗೆ ಮೋಜು ಮಸ್ತಿ ನಡೆಸುತ್ತಿದ್ದರು ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.
ಸ್ನೇಹಿತರ ತಂಡದೊಂದಿಗೆ ಪಾರ್ಟಿ ನಡೆಸುವುದು, ವೇಶ್ಯೆಯರ ಸಹವಾಸ, ಸೆಕ್ಸ್ ಕ್ಲಬ್ಗಳಿಗೆ ಭೇಟಿ ಇತ್ಯಾದಿ ಮೋಜಿನ ಕೃತ್ಯಗಳ ವೆಚ್ಚವನ್ನು ತನ್ನ ಉದ್ಯಮಕ್ಕೆ ಸಂಬಂಧಿಸಿದ ವೆಚ್ಚ ಎಂದು ಲೆಕ್ಕಪತ್ರದಲ್ಲಿ ನಮೂದಿಸಿ ಸಾವಿರಾರು ಡಾಲರ್ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುತ್ತಿದ್ದರು.
ಸುಮಾರು 1,06,000 ಡಾಲರ್ಗಳಷ್ಟು ತೆರಿಗೆಯನ್ನು ಹಂಟರ್ ವಂಚಿಸಿದ್ದಾರೆ ಎಂದು ಅಮೆರಿಕದ ಖಾಸಗಿ ತನಿಖಾ ಸಂಸ್ಥೆಯ ಹೇಳಿಕೆಯನ್ನು ಉಲ್ಲೇಖಿಸಿದ ವರದಿ ಹೇಳಿದೆ. ವೆಸ್ಟ್ ಕೋಸ್ಟ್ ನಲ್ಲಿರುವ ಉದ್ದಿಮೆಯ ಸಹಾಯಕಿಯ ವೇತನ ಎಂದು ಹಂಟರ್ ಲೆಕ್ಕಪತ್ರದಲ್ಲಿ ನಮೂದಿಸಿದ್ದಾರೆ. ಆದರೆ ಅವರು ಉಲ್ಲೇಖಿಸಿರುವ ಮಹಿಳೆ ಓರ್ವ ವೇಶ್ಯೆಯಾಗಿದ್ದಾಳೆ. ಅಲ್ಲದೆ ತನ್ನ ಮಾಲಕತ್ವದ ಸಲಹಾ ಸಂಸ್ಥೆ ‘ಒವಾಸ್ಕೊ ಪಿಸಿ’ಗೆ ವೇಶ್ಯೆಯರನ್ನು ವಿಮಾನದ ಮೂಲಕ ಕರೆಸಿಕೊಂಡು ಅವರ ವಿಮಾನ ಪ್ರಯಾಣದ ವೆಚ್ಚವನ್ನು ಸಾರಿಗೆ ವೆಚ್ಚ ಎಂದು ಲೆಕ್ಕಪತ್ರದಲ್ಲಿ ತೋರಿಸಿದ್ದಾರೆ. ಲಾಸ್ ಏಂಜಲೀಸ್ನಲ್ಲಿರುವ ಸೆಕ್ಸ್ಕ್ಲಬ್ ನ ಸದಸ್ಯನಾಗಿ ಪಾವತಿಸಿದ ಶುಲ್ಕವನ್ನು ಗಾಲ್ಫ್ ಕ್ಲಬ್ ಸದಸ್ಯತ್ವದ ಶುಲ್ಕ ಎಂದು ನಮೂದಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಅಮೆರಿಕ ಸಂಸತ್ತಿನ ‘ವಿಧಾನ ಮತ್ತು ಮಾರ್ಗ’ ಸ್ಥಾಯೀ ಸಮಿತಿಯು ಹಂಟರ್ ವಿರುದ್ಧದ ತೆರಿಗೆ ವಂಚನೆ ಆರೋಪದ ತನಿಖೆ ನಡೆಸುತ್ತಿದೆ.