ಗಡಿ ವಿವಾದ ಉಲ್ಬಣ: ಕಾಂಬೋಡಿಯಾ ಮಿಲಿಟರಿ ನೆಲೆಗಳ ಮೇಲೆ ಥೈಲ್ಯಾಂಡ್ ದಾಳಿ; 11 ಮಂದಿ ಸಾವು
PC | aljazeera.com
ಬ್ಯಾಂಕಾಕ್: ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿ ವಿವಾದ ಗುರುವಾರ ಉಲ್ಬಣಿಸಿದ್ದು ಕಾಂಬೋಡಿಯಾದ ಮಿಲಿಟರಿ ನೆಲೆಗಳ ಮೇಲೆ ಥೈಲ್ಯಾಂಡ್ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಥೈಲ್ಯಾಂಡ್‍ನ ಮೇಲೆ ಕಾಂಬೋಡಿಯಾ ಕ್ಷಿಪಣಿ ಮತ್ತು ಫಿರಂಗಿ ದಾಳಿ ತೀವ್ರಗೊಳಿಸಿದೆ. ಥೈಲ್ಯಾಂಡ್‍ನಲ್ಲಿ ಮಗು ಸೇರಿದಂತೆ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು ಇತರ 31 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕಂಬೋಡಿಯಾದ ಕ್ಷಿಪಣಿ ಮತ್ತು ಫಿರಂಗಿ ದಾಳಿಯಲ್ಲಿ ಒಂದು ಮಗು, ಯೋಧ ಸೇರಿದಂತೆ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. 7 ಯೋಧರ ಸಹಿತ 31 ಮಂದಿ ಗಾಯಗೊಂಡಿದ್ದಾರೆ ಎಂದು ಥೈಲ್ಯಾಂಡ್ ಸರಕಾರ ಹೇಳಿದೆ. ಕಂಬೋಡಿಯಾದಲ್ಲಿ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
ಗಡಿಭಾಗದ ಸನಿಹದಲ್ಲಿರುವ ಫನೋಮ್ ಡಾನ್‍ರಾಕ್ ಜಿಲ್ಲಾಸ್ಪತ್ರೆಯ ಮೇಲೆ ಕಂಬೋಡಿಯಾ ಕ್ಷಿಪಣಿ ದಾಳಿ ನಡೆಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಸ್ಪತ್ರೆಯ ಆವರಣಕ್ಕೆ ಕ್ಷಿಪಣಿ ಅಪ್ಪಳಿಸಿದ್ದು ಯಾವುದೇ ಸಾವು-ನೋವು ವರದಿಯಾಗಿಲ್ಲ. ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ರೋಗಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಥೈಲ್ಯಾಂಡ್ ಅಧಿಕಾರಿಗಳು ಹೇಳಿದ್ದಾರೆ. ದಾಳಿಯ ಹಿನ್ನೆಲೆಯಲ್ಲಿ ಫನೋಮ್ ಡಾನ್‍ರಾಕ್ ಜಿಲ್ಲೆಯ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಥೈಲ್ಯಾಂಡ್‍ನ ಶಿಕ್ಷಣ ಇಲಾಖೆ ಸೂಚಿಸಿದೆ. ಸಿಸಾಕೆಟ್ ಪ್ರಾಂತದ ಪೆಟ್ರೋಲ್ ಸ್ಟೇಷನ್ ಬಳಿ ನಡೆದ ರಾಕೆಟ್ ದಾಳಿಯಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿದೆ ಎಂದು ಸಾರ್ವಜನಿಕ ಆರೋಗ್ಯ ಇಲಾಖೆಯನ್ನು ಉಲ್ಲೇಖಿಸಿ `ದಿ ನೇಷನ್ ಥೈಲ್ಯಾಂಡ್' ವರದಿ ಮಾಡಿದೆ.
ಆಸ್ಪತ್ರೆ ಸೇರಿದಂತೆ ನಾಗರಿಕ ಪ್ರದೇಶಗಳನ್ನು ನೇರವಾಗಿ ಗುರಿಯಾಗಿಸಿಕೊಂಡಿರುವುದು ಯುದ್ಧಾಪರಾಧವಾಗಿದ್ದು ಇದಕ್ಕೆ ಕಂಬೋಡಿಯಾವನ್ನು ಹೊಣೆಯಾಗಿಸಬೇಕು ಎಂದು ಥೈಲ್ಯಾಂಡ್ ಅಧಿಕಾರಿಗಳು ಆಗ್ರಹಿಸಿದ್ದು, ಅಮಾನವೀಯ ಆಕ್ರಮಣಗಳಿಂದ ನಮ್ಮ ಸಾರ್ವಭೌಮತ್ವವನ್ನು ಮತ್ತು ಜನರನ್ನು ರಕ್ಷಿಸಲು ಸಿದ್ಧ ಎಂದು ಹೇಳಿದ್ದಾರೆ.
ಥೈಲ್ಯಾಂಡ್ ಪೂರ್ವ ನಿರ್ಧರಿತ ಮತ್ತು ಉದ್ದೇಶಪೂರ್ವಕ ದಾಳಿ ನಡೆಸುತ್ತಿದ್ದು ವಿಶ್ವಸಂಸ್ಥೆ ಭದ್ರತಾ ಮಂಡಳಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕಂಬೋಡಿಯಾ ಪ್ರಧಾನಿ ಹುನ್ ಮ್ಯಾನೆಟ್ ಆಗ್ರಹಿಸಿದ್ದು ಕಂಬೋಡಿಯಾ ಸ್ವಯಂ ರಕ್ಷಣೆಗೆ ಕ್ರಮ ಕೈಗೊಂಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. `ಎರಡೂ ದೇಶಗಳು ಸಂಯಮ ವಹಿಸಿ ಶಾಂತಿ ಕಾಪಾಡಬೇಕೆಂದು `ಆಸಿಯಾನ್' ಗುಂಪಿನ ಅಧ್ಯಕ್ಷ ಮಲೇಶ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಆಗ್ರಹಿಸಿದ್ದಾರೆ. ಎರಡೂ ದೇಶಗಳು ಪರಸ್ಪರ ಮಾತುಕತೆಯ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಕಂಬೋಡಿಯಾದ ಮಿತ್ರರಾಷ್ಟ್ರ ಚೀನಾ ಕರೆ ನೀಡಿದೆ.
ಗಡಿ ಮುಚ್ಚಿದ ಥೈಲ್ಯಾಂಡ್:
ಕಂಬೋಡಿಯಾದೊಂದಿಗಿನ ಎಲ್ಲಾ ಗಡಿ ಚೆಕ್‍ಪೋಸ್ಟ್‍ಗಳನ್ನು ಮುಚ್ಚಿರುವುದಾಗಿ ಥೈಲ್ಯಾಂಡ್ ಘೋಷಿಸಿದೆ. `ನಾವು ಕ್ರಮಗಳನ್ನು 4ರ ಹಂತಕ್ಕೆ ಹೆಚ್ಚಿಸಿದ್ದು ಇದರಲ್ಲಿ ಥೈ-ಕಂಬೋಡಿಯಾ ಗಡಿಯಲ್ಲಿನ ಎಲ್ಲಾ ಚೆಕ್‍ಪೋಸ್ಟ್‍ಗಳ ಸಂಪೂರ್ಣ ಮುಚ್ಚುವಿಕೆಯೂ ಒಳಗೊಂಡಿದೆ ಎಂದು ಗಡಿ ಭಾಗದ ಪರಿಸ್ಥಿತಿಯ ಮೇಲೆ ನಿಗಾ ವಹಿಸಲು ರಚಿಸಲಾದ ತಾತ್ಕಾಲಿಕ ಸಮಿತಿಯ ವಕ್ತಾರ ಅಡ್ಮಿರಲ್ ಸುರ್ಸಾಂತ್ ಕೊಂಗ್ಸಿರಿ ಹೇಳಿದ್ದಾರೆ. ಕಂಬೋಡಿಯಾದ ಗಡಿ ನಗರಗಳಿಗೆ ವಿದ್ಯುತ್ ಮತ್ತು ಇಂಟರ್‍ನೆಟ್ ಸಂಪರ್ಕ ಕಡಿತಗೊಳಿಸುವುದಾಗಿ ಥೈಲ್ಯಾಂಡ್ ಎಚ್ಚರಿಸಿದೆ. ಇದಕ್ಕೆ ಪ್ರತಿಯಾಗಿ ಕಂಬೋಡಿಯಾವು ಥೈಲ್ಯಾಂಡ್‍ನ ಹಣ್ಣು, ತರಕಾರಿ ಮತ್ತು ಟಿವಿ ಕಾರ್ಯಕ್ರಮಗಳನ್ನು ನಿಷೇಧಿಸಿದೆ. ಎರಡೂ ದೇಶಗಳು ತಮ್ಮ ರಾಜತಾಂತ್ರಿಕರನ್ನು ವಾಪಾಸು ಕರೆಸಿಕೊಂಡಿವೆ.