ಬ್ರಿಟನ್: ಲೈಂಗಿಕ ಅಪರಾಧ ಶಿಕ್ಷೆಗೆ ಒಳಗಾದವರಲ್ಲಿ ಭಾರತೀಯರೇ ಅಧಿಕ!
ಲಂಡನ್: ಬ್ರಿಟನ್ ನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾದ ವಿದೇಶಿಯರ ಪೈಕಿ ಭಾರತೀಯರು ಅತ್ಯಧಿಕ ಸಂಖ್ಯೆಯಲ್ಲಿರುವುದು ಅಂಕಿ ಅಂಶಗಳಿಂದ ದೃಢಪಟ್ಟಿದೆ.
ಹಿಂದಿನ ಅವಧಿಗೆ ಹೋಲಿಸಿದರೆ ಬ್ರಿಟನ್ ನಲ್ಲಿ ಲೈಂಗಿಕ ಅಪರಾಧಗಳಿಗೆ ಶಿಕ್ಷೆಯಾಗುತ್ತಿರುವ ಭಾರತೀಯರ ಸಂಖ್ಯೆ ಶೇಕಡ 257ರಷ್ಟು ಹೆಚ್ಚಿದೆ, ಉಳಿದಂತೆ ನೈಜೀರಿಯಾ (ಶೇಕಡ 166), ಇರಾಕ್ (160%) ನಂತರದ ಸ್ಥಾನಗಳಲ್ಲಿದ್ದಾರೆ. 2021ರಲ್ಲಿ 28 ಮಂದಿ ಭಾರತೀಯರು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಿದ್ದರೆ, 2024ರಲ್ಲಿ ಈ ಪ್ರಮಾಣ 100ಕ್ಕೇರಿದೆ ಎಂದು ಬ್ರಿಟನ್ನ ನ್ಯಾಯಾಂಘ ಸಚಿವಾಲಯ ಬಿಡುಗಡೆಗೊಳಿಸಿದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ಸೆಂಟರ್ ಫಾರ್ ಮೈಗ್ರೇಶನ್ ಕಂಟ್ರೋಲ್ ಎಂಬ ಚಿಂತಕಕೂಟ ನ್ಯಾಯಾಂಗ ಸಚಿವಾಲಯಕ್ಕೆ ಸಲ್ಲಿಸಿದ್ದ ಮಾಹಿತಿ ಸ್ವಾತಂತ್ರ್ಯ ಮನವಿಯಡಿ ಪೊಲೀಸ್ ನ್ಯಾಷನಲ್ ಕಂಪ್ಯೂಟರ್‌ನಿಂದ ಲಭ್ಯವಾದ ಮಾಹಿತಿಯಿಂದ ಈ ಅಂಶ ಬಹಿರಂಗವಾಗಿದೆ.
ಎಲ್ಲ ವಿಧದ ಅಪರಾಧಗಳಿಗೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಿರುವವರ ಪೈಕಿ ಭಾರತೀಯರು ಮೂರನೇ ಸ್ಥಾನದಲ್ಲಿದ್ದಾರೆ. 2021ರಿಂದ 2024ರ ಅವಧಿಯಲ್ಲಿ ಶಿಕ್ಷೆಗೆ ಒಳಗಾದ ಭಾರತೀಯರ ಪ್ರಮಾಣ ಶೇಕಡ 115ರಷ್ಟು ಹೆಚ್ಚಿದೆ. ಅಲ್ಜೀರಿಯಾ ಎರಡನೇ ಹಾಗೂ ಇಥಿಯೋಪಿಯಾ ಪ್ರಥಮ ಸ್ಥಾನದಲ್ಲಿದೆ. 2021ರಲ್ಲಿ ವಿವಿಧ ಅಪರಾಧಗಳಿಗೆ 273 ಮಂದಿ ಭಾರತೀಯರು ಶಿಕ್ಷೆಗೆ ಒಳಗಾಗಿದ್ದರೆ, 2024ರಲ್ಲಿ ಈ ಸಂಖ್ಯೆ 588ಕ್ಕೆ ಹೆಚ್ಚಿದೆ.
ಗೃಹ ಇಲಾಖೆ ಬಿಡುಗಡೆ ಮಾಡಿರುವ ಹೊಸ ಇಮಿಗ್ರೇಶನ್ ಅಂಕಿ ಅಂಶಗಳ ಪ್ರಕಾರ, 2024ರಲ್ಲಿ 293 ಮಂದಿ ಭಾರತೀಯರು ಸಣ್ಣ ನಾವೆಗಳಲ್ಲಿ ಅಕ್ರಮವಾಗಿ ಬ್ರಿಟನ್ಗೆ ಪ್ರವೇಶಿಸಿದ್ದಾರೆ. ಈ ವರ್ಷದ ಜನವರಿಯಿಂದ ಜೂನ್ ಅವಧಿಯಲ್ಲಿ ಒಟ್ಟು 206 ಭಾರತೀಯರು ಅಕ್ರಮವಾಗಿ ಬ್ರಿಟನ್ಗೆ ವಲಸೆ ಬಂದಿದ್ದಾರೆ. ಆದರೆ ಅಫ್ಘಾನಿಸ್ತಾನ, ಇರಾನ್ ಮತ್ತು ಸಿರಿಯಾದಿಂದ ಅಕ್ರಮವಾಗಿ ಬ್ರಿಟನ್ ಗೆ ಬಂದ ಜನರಿಗೆ ಹೋಲಿಸಿದರೆ ಭಾರತೀಯರ ಸಂಖ್ಯೆ ಕಡಿಮೆ.