×
Ad

ಕೆನಡಾ: ನಿಜ್ಜಾರ್ ಆಪ್ತನ ಮನೆಯ ಮೇಲೆ ಗುಂಡಿನ ದಾಳಿ

Update: 2024-02-02 22:08 IST

ಹರ್ದೀಪ್ ಸಿಂಗ್ ನಿಜ್ಜಾರ್‌ | Photo: indiatoday.in

ಒಟ್ಟಾವ : ಕೆನಡಾದಲ್ಲಿ ಸಕ್ರಿಯನಾಗಿದ್ದ ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್‌ ನ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಸಿಮ್ರನ್‍ಜೀತ್ ಸಿಂಗ್ ಮನೆಯತ್ತ ಗುರುತಿಸಲಾಗದ ವ್ಯಕ್ತಿಗಳು ಗುರುವಾರ ಬೆಳಿಗ್ಗೆ ಹಲವು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಹರ್ದೀಪ್ ಸಿಂಗ್ ನಿಜ್ಜಾರ್‌ ನನ್ನು ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಸರ್ರೆ ನಗರದಲ್ಲಿ ಜೂನ್ 18ರಂದು ಹತ್ಯೆ ಮಾಡಲಾಗಿತ್ತು. ನಿಜ್ಜಾರ್‌ ನ ಆಪ್ತನಾಗಿರುವ ಸಿಮ್ರನ್‍ಜೀತ್ ಸಿಂಗ್‍ನ ಮನೆಯ ಮೇಲೆ ಗುರುವಾರ ಬೆಳಿಗ್ಗೆ ಸುಮಾರು 1 ಗಂಟೆಗೆ ಹಲವು ಸುತ್ತು ಗುಂಡು ಹಾರಿಸಲಾಗಿದ್ದು ಮನೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಕಾರಿಗೆ ಹಾಗೂ ಮನೆಯ ಗೋಡೆಗೆ ಬುಲೆಟ್ ಅಪ್ಪಳಿಸಿದೆ. ಗುಂಡು ಹಾರಾಟದಿಂದ ಯಾರೂ ಗಾಯಗೊಂಡಿಲ್ಲ. ಕೃತ್ಯಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಸಮೀಪದ ಮನೆಯವರ ಮಾಹಿತಿಯನ್ನು ಆಧರಿಸಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಿಮ್ರಾನ್‍ಜೀತ್ ಸಿಂಗ್ ಜನವರಿ 26ರಂದು ವ್ಯಾಂಕೋವರ್‌ ನಲ್ಲಿ ಭಾರತೀಯ ಕಾನ್ಸುಲೇಟ್ ಎದುರು ಪ್ರತಿಭಟನೆ ಆಯೋಜಿಸುವಲ್ಲಿ ನೆರವಾಗಿದ್ದ ಎಂದು ವರದಿಯಾಗಿದೆ. ಈ ಮಧ್ಯೆ, ಸಿಂಗ್ ಮನೆಯ ಮೇಲೆ ನಡೆದಿರುವ ಗುಂಡು ಹಾರಾಟದ ಹಿಂದೆ ಭಾರತದ ಕೈವಾಡವಿದೆ ಎಂದು ಖಾಲಿಸ್ತಾನ್ ಪರ ಸಂಘಟನೆಗಳು ಆರೋಪಿಸಿವೆ. `ಸಿಮ್ರಾನ್‍ಜೀತ್ ಸಿಂಗ್‍ರನ್ನು ಹೆದರಿಸಲು ಭಾರತ ಸರಕಾರ ಅಥವಾ ಅದರ ಏಜೆಂಟರು ಈ ಕೆಲಸ ಮಾಡಿದ್ದಾರೆ' ಎಂದು ಬ್ರಿಟಿಷ್ ಕೊಲಂಬಿಯಾ ಗುರುದ್ವಾರಗಳ ಸಮಿತಿಯ ವಕ್ತಾರ ಮಣಿಂದರ್ ಸಿಂಗ್ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News