ಅಮೆರಿಕದ ಮೇಲೆ ಪ್ರತೀಕಾರ ಸುಂಕ ವಿಧಿಸಿದ ಚೀನಾ
PC : PTI
ಬೀಜಿಂಗ್: ಚೀನಾದ ಆಮದುಗಳ ಮೇಲೆ ಹೆಚ್ಚುವರಿ 10% ಸುಂಕ ವಿಧಿಸುವ ಟ್ರಂಪ್ ಕ್ರಮಕ್ಕೆ ಪ್ರತಿಯಾಗಿ ಅಮೆರಿಕದ ಆಮದಿನ ಮೇಲೆ ಚೀನಾ ಪ್ರತೀಕಾರ ಸುಂಕ ಘೋಷಿಸಿದೆ.
ಅಮೆರಿಕದಿಂದ ಆಮದಾಗುವ ಕಚ್ಛಾತೈಲ, ಕೃಷಿ ಯಂತ್ರೋಪಕರಣ ಹಾಗೂ ದೊಡ್ಡ ಸಿಲಿಂಡರ್ಗಳನ್ನು ಹೊಂದಿರುವ ವಾಹನಗಳು, ಪಿಕಪ್ ಟ್ರಕ್ಗಳ ಮೇಲೆ 10% ಸುಂಕ, ಕಲ್ಲಿದ್ದಲು ಮತ್ತು ಎಲ್ಎನ್ಜಿ(ದ್ರವೀಕೃತ ನೈಸರ್ಗಿಕ ಅನಿಲ) ಆಮದಿನ ಮೇಲೆ 15% ಸುಂಕ ವಿಧಿಸುವುದಾಗಿ ಚೀನಾದ ವಿದೇಶಾಂಗ ಇಲಾಖೆ ಮಂಗಳವಾರ ಹೇಳಿದ್ದು ಫೆಬ್ರವರಿ 10ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಅಮೆರಿಕದ ಏಕಪಕ್ಷೀಯ ಸುಂಕ ಹೆಚ್ಚಳ ಕ್ರಮ ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯೂಟಿಒ)ದ ನಿಯಮಗಳ ಗಂಭೀರ ಉಲ್ಲಂಘನೆಯಾಗಿದ್ದು ಚೀನಾ ಮತ್ತು ಅಮೆರಿಕ ನಡುವಿನ ಸಾಮಾನ್ಯ ಆರ್ಥಿಕ ಮತ್ತು ವ್ಯಾಪಾರ ಸಹಕಾರಕ್ಕೆ ಅಡ್ಡಿಯಾಗಲಿದೆ ಎಂದು ಚೀನಾ ಟೀಕಿಸಿದೆ.
ಈ ಮಧ್ಯೆ, ಮೆಕ್ಸಿಕೋ ಮತ್ತು ಕೆನಡಾದ ನಾಯಕರ ಜತೆ ಒಪ್ಪಂದಕ್ಕೆ ಬಂದ ಹಿನ್ನೆಲೆಯಲ್ಲಿ ಈ ಎರಡು ದೇಶಗಳ ವಿರುದ್ಧದ ಹೆಚ್ಚುವರಿ ಸುಂಕ ಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ಆದರೆ ಚೀನಾದ ವಿರುದ್ಧದ 10% ಹೆಚ್ಚುವರಿ ಸುಂಕ ನಿಗದಿತ ರೀತಿಯಲ್ಲಿಯೇ ಜಾರಿಗೊಳ್ಳಲಿದೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅಧ್ಯಕ್ಷ ಟ್ರಂಪ್ ಅವರು ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಜತೆ ಮಾತುಕತೆ ನಡೆಸುವ ಯೋಜನೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕ ಮತ್ತು ಚೀನಾ ನಡುವಿನ ಉದ್ವಿಗ್ನತೆ ಹೆಚ್ಚಿರುವ ಸಂದರ್ಭದಲ್ಲೇ ಟ್ರಂಪ್ ಅವರ ಸುಂಕ ಬೆದರಿಕೆ ಉಭಯ ದೇಶಗಳ ನಡುವೆ ವ್ಯಾಪಾರ ಮುಖಾಮುಖಿಗೆ ದಾರಿ ಮಾಡಿಕೊಟ್ಟಿದೆ. ತನ್ನ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಅಗತ್ಯವಾದ ಪ್ರತಿರೋಧ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ . ಅಮೆರಿಕದ ಕ್ರಮವು ಡಬ್ಯ್ಲೂಟಿಒದ ನಿಯಮವನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಜಾಗತಿಕ ವಾಣಿಜ್ಯ ಪ್ರಕ್ರಿಯೆಯನ್ನು ನಿಯಂತ್ರಿಸುವ ಡಬ್ಯ್ಲೂಟಿಒದಲ್ಲಿ ಅಮೆರಿಕ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಚೀನಾ ಎಚ್ಚರಿಕೆ ನೀಡಿದೆ.
ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ, ಮಾದಕ ವಸ್ತು ನಿಯಂತ್ರಣದಲ್ಲಿ ಕಷ್ಟಪಟ್ಟು ಸಾಧಿಸಿದ ಸಕಾರಾತ್ಮಕ ಪ್ರಗತಿಯನ್ನು ಉಳಿಸಿಕೊಳ್ಳಲು ಮತ್ತು ಚೀನಾ-ಅಮೆರಿಕ ಸಂಬಂಧಗಳಲ್ಲಿನ ಸ್ಥಿರತೆಯನ್ನು ಉತ್ತೇಜಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಚೀನಾವು ಅಮೆರಿಕವನ್ನು ಆಗ್ರಹಿಸಿದೆ.
ಚೀನಾವು ಫೆಂಟಾನಿಲ್(ನೋವು ನಿರೋಧಕ ಔಷಧ) ಉತ್ಪಾದನೆಗೆ ಅವಕಾಶ ನೀಡುತ್ತದೆ ಮತ್ತು ಅದನ್ನು ಮೆಕ್ಸಿಕೋಗೆ ರಫ್ತು ಮಾಡುತ್ತದೆ. ಅಲ್ಲಿ ಅದನ್ನು ಮಾತ್ರೆಗಳಾಗಿ ಪರಿವರ್ತಿಸಿ ಮಾದಕವಸ್ತುಗಳ ರೂಪದಲ್ಲಿ ಅಮೆರಿಕಾಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ ಎಂದು ಅಮೆರಿಕ ಆರೋಪಿಸುತ್ತಿದೆ. ಆದರೆ ದೇಶದಲ್ಲಿ ಮಾದಕ ವಸ್ತುಗಳ ವಿರುದ್ಧ ಕಠಿಣ ಕಾನೂನು ಜಾರಿಯಲ್ಲಿದೆ ಎಂದು ಚೀನಾ ಹೇಳುತ್ತಿದೆ.
ಒಂದು ವೇಳೆ ಚೀನಾವು ಒಪ್ಪಂದಕ್ಕೆ ಮುಂದಾಗದೆ ಪ್ರತೀಕಾರ ಕ್ರಮ ಕೈಗೊಂಡರೆ ಚೀನಾದ ವಿರುದ್ಧ ಹೆಚ್ಚುವರಿ ಆಮದು ತೆರಿಗೆ ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
►ಗೂಗಲ್ ಸೇರಿದಂತೆ ಅಮೆರಿಕದ ಸಂಸ್ಥೆಗಳ ವಿರುದ್ಧ ಕ್ರಮ: ಚೀನಾ
ಚೀನಾದ ಸರಕುಗಳ ಮೇಲೆ ಅಮೆರಿಕದ ಹೆಚ್ಚುವರಿ ಸುಂಕ ಜಾರಿಗೆ ಬಂದ ಕೆಲವೇ ಕ್ಷಣಗಳಲ್ಲಿ ಗೂಗಲ್, ಜನಪ್ರಿಯ ಫ್ಯಾಶನ್ ಬ್ರಾಂಡ್ ಕಾಲ್ವಿನ್ ಕ್ಲೆಯ್ನ್ ಸೇರಿದಂತೆ ಅಮೆರಿಕದ ವ್ಯವಹಾರಗಳನ್ನು ಗುರಿಯಾಗಿಸಿಕೊಂಡು ಚೀನಾ ಮಂಗಳವಾರ ವ್ಯಾಪಕ ಶ್ರೇಣಿಯ ಕ್ರಮಗಳನ್ನು ಪ್ರಕಟಿಸಿದೆ.
ಫ್ಯಾಶನ್ ಬ್ರಾಂಡ್ ಕಾಲ್ವಿನ್ ಕ್ಲೆಯ್ನ್ನ ಮಾಲಕ ಸಂಸ್ಥೆ ಪಿವಿಎಚ್ ಕಾರ್ಪ್, ಅಮೆರಿಕದ ಬಯೊಟೆಕ್ನಾಲಜಿ ಸಂಸ್ಥೆ ಇಲ್ಯುಮಿನಾಗಳನ್ನು `ವಿಶ್ವಾಸಾರ್ಹವಲ್ಲದ ಘಟಕ'ಗಳ ಪಟ್ಟಿಯಲ್ಲಿ ಇರಿಸಿದೆ ಎಂದು ಚೀನಾದ ವಾಣಿಜ್ಯ ಇಲಾಖೆ ಮಂಗಳವಾರ ಘೋಷಿಸಿದೆ. ಈ ಎರಡು ಸಂಸ್ಥೆಗಳು ಚೀನಾದ ಸಂಸ್ಥೆಗಳ ವಿರುದ್ಧ ತಾರತಮ್ಯದ ಕ್ರಮಗಳನ್ನು ಅನುಸರಿಸುತ್ತಿವೆ ಮತ್ತು ಚೀನಾದ ಸಂಸ್ಥೆಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗೆ ಹಾನಿ ಎಸಗಿವೆ ಎಂದು ಇಲಾಖೆ ಹೇಳಿದೆ. ಕಪ್ಪುಪಟ್ಟಿಗೆ ಸೇರ್ಪಡೆಯಾಗುವ ಸಂಸ್ಥೆಗಳು ದಂಡ ಮತ್ತು ವ್ಯಾಪಕ ಶ್ರೇಣಿಯ ಇತರ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ.
ಗೂಗಲ್ ಚೀನಾದ ಏಕಸ್ವಾಮ್ಯ ವಿರೋಧಿ ಕಾನೂನನ್ನು ಉಲ್ಲಂಘಿಸುತ್ತಿದೆ ಮತ್ತು ಸಂಸ್ಥೆಯ ವಿರುದ್ಧ ಕಾನೂನು ಪ್ರಕಾರ ತನಿಖೆ ನಡೆಯಲಿದೆ ಎಂದು ಚೀನಾದ ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ ಹೇಳಿದೆ