ಈಕ್ವೆಡಾರ್: ಚೀನಾ ರಾಯಭಾರ ಕಚೇರಿ ಸೇವೆ ಸ್ಥಗಿತ
ಬೀಜಿಂಗ್ : ಈಕ್ವೆಡಾರ್ನಲ್ಲಿ ಆಂತರಿಕ ಸಂಘರ್ಷ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಆ ದೇಶದಲ್ಲಿರುವ ರಾಯಭಾರ ಕಚೇರಿ ಹಾಗೂ ಕಾನ್ಸುಲೇಟ್ ಕಚೇರಿಗಳ ಸೇವೆಯನ್ನು ಅಮಾನತುಗೊಳಿಸಲಾಗಿದೆ. ಸಾರ್ವಜನಿಕ ಸೇವೆ ಮರು ಆರಂಭದ ಬಗ್ಗೆ ಕ್ರಮೇಣ ಮಾಹಿತಿ ನೀಡಲಾಗುವುದು ಎಂದು ಚೀನಾ ಬುಧವಾರ ಹೇಳಿದೆ.
ಈಕ್ವೆಡಾರ್ನಲ್ಲಿ ಚೀನೀ ಪ್ರಜೆಗಳು ಹಾಗೂ ಸಂಸ್ಥೆಗಳ ಭದ್ರತಾ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಈಕ್ವೆಡಾರ್ ಸರಕಾರ ನಡೆಸುತ್ತಿರುವ ಕ್ರಮಗಳನ್ನು ಬೆಂಬಲಿಸುತ್ತೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್ ಹೇಳಿದ್ದಾರೆ.
ಈಕ್ವೆಡಾರ್ನಲ್ಲಿ ಕ್ರಿಮಿನಲ್ ಗ್ಯಾಂಗ್ಗಳನ್ನು ಹತ್ತಿಕ್ಕಲು ಸರಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಬಂದರು ನಗರ ಗಯಾಕ್ವಿಲ್ ನಲ್ಲಿ ಡಕಾಯಿತರ ಗುಂಪಿನ ದಾಳಿಯಲ್ಲಿ 8 ಮಂದಿ ಹತರಾಗಿದ್ದು ಮೂವರು ಗಾಯಗೊಂಡಿದ್ದಾರೆ. ಸಮೀಪದ ನೊಬೊಲ್ ನಗರದಲ್ಲಿ ಇಬ್ಬರು ಅಧಿಕಾರಿಗಳನ್ನು ಕೊಲೆ ಮಾಡಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.