×
Ad

ಬೆಳೆನಾಶಕ ಶಿಲೀಂಧ್ರ ಅಮೆರಿಕಕ್ಕೆ ಕಳ್ಳಸಾಗಣೆ: ಚೀನಿ ವಿಜ್ಞಾನಿ, ಸ್ನೇಹಿತನ ಬಂಧನ

Update: 2025-06-04 16:58 IST

Credit : AP

 : NDTV 

ವಾಷಿಂಗ್ಟನ್: ಅಮೆರಿಕಕ್ಕೆ ಅತ್ಯಂತ ಅಪಾಯಕಾರಿ ಕೃಷಿ ರೋಗಕಾರಕವನ್ನು ಕಳ್ಳ ಸಾಗಣೆ ಮಾಡಿದ ಆರೋಪದಲ್ಲಿ ಇಬ್ಬರು ಚೀನಿ ಪ್ರಜೆಗಳನ್ನು ಬಂಧಿಸಲಾಗಿದೆ.

ಚೀನಿ ಪ್ರಜೆಗಳಾದ ಯುನ್‌ಕಿಂಗ್ ಜಿಯಾನ್(33) ಮತ್ತು ಝುನ್‌ಯಾಂಗ್ ಲಿಯು(34) ಅವರ ವಿರುದ್ಧ ಅಮೆರಿಕಕ್ಕೆ ಸರಕುಗಳ ಕಳ್ಳಸಾಗಣೆ,ಸುಳ್ಳು ಹೇಳಿಕೆ ಮತ್ತು ವೀಸಾ ವಂಚನೆ ಆರೋಪಗಳನ್ನು ಹೊರಿಸಲಾಗಿದೆ ಎಂದು ಮಿಷಿಗನ್ ಪೂರ್ವ ಜಿಲ್ಲೆಯ ಯುಎಸ್ ಅಟಾರ್ನಿ ಕಚೇರಿಯು ತಿಳಿಸಿದೆ.

ಫೆಡರಲ್ ಪ್ರಾಸಿಕ್ಯೂಟರ್‌ಗಳ ಪ್ರಕಾರ ಜಿಯಾನ್ ಮತ್ತು ಲಿಯು ಫ್ಯುಸೇರಿಯಂ ಗ್ರಾಮಿನೇರಮ್ ಅನ್ನು ಅಕ್ರಮವಾಗಿ ಆಮದು ಮಾಡಿದ್ದು,ಈ ಶಿಲೀಂಧ್ರವು ಗೋದಿ,ಬಾರ್ಲಿ,ಮೆಕ್ಕೆಜೋಳ ಮತ್ತು ಭತ್ತದ ಬೆಳೆಗಳ ಮೇಲೆ ಪರಿಣಾಮ ಬೀರುವ ವಿನಾಶಕಾರಿ ರೋಗ ಹೆಡ್ ಬ್ಲೈಟ್‌ಗೆ ಕಾರಣವಾಗುತ್ತದೆ.

ಈ ರೋಗಕಾರಕವು ಜಾಗತಿಕವಾಗಿ ಕೋಟ್ಯಾಂತರ ಡಾ.ಮೌಲ್ಯದ ಬೆಳೆಗಳ ನಷ್ಟಕ್ಕೆ ಕಾರಣವಾಗಿದ್ದು,ಮನುಷ್ಯರು ಮತ್ತು ಜಾನುವಾರುಗಳಿಗೆ ಹಾನಿಯನ್ನುಂಟು ಮಾಡುವ ಮೈಕೋಟಾಕ್ಸಿನ್‌ಗಳನ್ನು ಉತ್ಪಾದಿಸುತ್ತದೆ.

ಈ ಪ್ರಕರಣವು ಜಾಗತಿಕ ಆಹಾರ ಭದ್ರತೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುವ ಶಿಲೀಂಧ್ರವನ್ನು ಒಳಗೊಂಡಿದೆ. ವಿದೇಶಿ ಪ್ರಜೆಗಳು ಅಮೆರಿಕದ ಸಂಶೋಧನಾ ಸಂಸ್ಥೆಯೊಂದಕ್ಕೆ ಈ ಜೈವಿಕ ರೋಗಕಾರಕವನ್ನು ಕಳ್ಳಸಾಗಣೆ ಮಾಡಿರುವುದು ಗಂಭೀರ ರಾಷ್ಟ್ರೀಯ ಭದ್ರತಾ ಕಳವಳದ ವಿಷಯವಾಗಿದೆ ಎಂದು ಅಟಾರ್ನಿ ಜೆರೋಮ್ ಎಫ್.ಗಾರ್ಗನ್ ಜ್ಯೂನಿಯರ್ ಹೇಳಿದರು.

ಜಿಯಾನ್ ಮಿಷಿಗನ್ ವಿವಿಯ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದು,ಸಂಶೋಧನೆಯಲ್ಲಿ ಬಳಸಲು ಈ ಶಿಲೀಂಧ್ರವನ್ನು ಡೆಟ್ರಾಯಿಟ್ ವಿಮಾನ ನಿಲ್ದಾಣದ ಮೂಲಕ ದೇಶದೊಳಗೆ ಕಳ್ಳ ಸಾಗಣೆ ಮಾಡಲಾಗಿತ್ತು ಎಂದು ಹೇಳಲಾಗಿದೆ.

ಜಿಯಾನ್ ಸಂಬಂಧಿತ ಸಂಶೋಧನೆಗಾಗಿ ಚೀನಾ ಸರಕಾರದಿಂದ ಹಣವನ್ನು ಪಡೆದಿದ್ದಾರೆ ಮತ್ತು ಚೀನಿ ಕಮ್ಯುನಿಸ್ಟ್ ಪಕ್ಷಕ್ಕೆ ದಾಖಲಿತ ನಿಷ್ಠೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ಜಿಯಾನ್ ಸ್ನೇಹಿತ ಲಿಯು ಇಂತಹುದೇ ರೋಗಕಾರಕದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಚೀನಿ ವಿವಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆರಂಭದಲ್ಲಿ ಪ್ರಕರಣದಲ್ಲಿ ತನ್ನ ಪಾತ್ರವನ್ನು ನಿರಾಕರಿಸಿದ್ದ ಲಿಯು ಬಳಿಕ ತಾನು ಅಮೆರಿಕಕ್ಕೆ ಶಿಲೀಂಧ್ರವನ್ನು ತಂದಿದ್ದನ್ನು ಒಪ್ಪಿಕೊಂಡಿದ್ದಾನೆ.

ಬಂಧನಗಳಿಗೆ ಪ್ರತಿಕ್ರಿಯಿಸಿರುವ ಎಫ್‌ಬಿಐ ಮುಖ್ಯಸ್ಥ ಕಾಶ್ ಪಟೇಲ್ ಅವರು ಪ್ರಕರಣದ ವ್ಯಾಪಕ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಜಿಯಾನ್ ಮತ್ತು ಲಿಯು ಪ್ರಸ್ತುತ ಫೆಡರಲ್ ಕಸ್ಟಡಿಯಲ್ಲಿದ್ದಾರೆ. ಆರೋಪ ಸಾಬೀತಾದರೆ ಅವರು ಗಮನಾರ್ಹ ಜೈಲುಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಮತ್ತು ಅವರನ್ನು ಅಮೆರಿಕದಿಂದ ಹೊರದಬ್ಬುವ ಸಾಧ್ಯತೆಯಿದೆ. ತನಿಖೆ ಮುಂದುವರಿದಿದ್ದು,ಹೆಚ್ಚಿನ ಆರೋಪಗಳು ಅಥವಾ ಇನ್ನಷ್ಟು ಸಹಚರರು ಭಾಗಿಯಾಗಿರುವ ಸಾಧ್ಯತೆಯನ್ನು ಅಧಿಕಾರಿಗಳು ತಳ್ಳಿಹಾಕಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News