ಝೀಬ್ರಾದಂತೆ ಕಾಣಲು ಕತ್ತೆಗಳಿಗೆ ಕಪ್ಪು, ಬಿಳಿ ಬಣ್ಣ ಬಳಿದ ಮೃಗಾಲಯ!
Photo: X/@Poverty_Suckz
ಬೀಜಿಂಗ್: ಚೀನಾದ ಮೃಗಾಲಯವೊಂದು ಝೀಬ್ರಾದಂತೆ ಕಾಣಲು ಕತ್ತೆಗಳಿಗೆ ಕಪ್ಪು ಮತ್ತು ಬಿಳಿ ಬಣ್ಣಗಳನ್ನು ಬಳಿದಿದೆ. ಈ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ತಮಾಷೆಗಾಗಿ ಮಾಡಲಾಗಿದೆ ಎಂದು ಮೃಗಾಲಯದ ಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದಾರೆ.
ಚೀನಾದ ಶಾಂಡೊಂಗ್ ಪ್ರಾಂತ್ಯದ ಝಿಬೋ ಸಿಟಿಯಲ್ಲಿರುವ ಮೃಗಾಲಯ, ಹೆಚ್ಚಿನ ಸಂದರ್ಶಕರನ್ನು ಆಕರ್ಷಿಸುವ ಪ್ರಯತ್ನದ ಭಾಗವಾಗಿ ಕತ್ತೆಗಳಿಗೆ ಕಪ್ಪು ಮತ್ತು ಬಿಳಿ ಬಣ್ಣಗಳನ್ನು ಬಳಿದು ಝೀಬ್ರಾದಂತೆ ಮಾಡಿದೆ. ಈ ಕುರಿತು ಅಸಲಿಯತ್ತು ಬಯಲಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಮೃಗಾಲಯದ ಪ್ರತಿನಿಧಿಗಳು, ಪ್ರಾಣಿಗಳ ಮೇಲೆ ಬಳಸಿದ ಬಣ್ಣವು ವಿಷಕಾರಿಯಲ್ಲ, ಮಾಲಕರು ಇದನ್ನು ತಮಾಷೆಗಾಗಿ ಮಾಡಿದ್ದಾರೆ. ಸಂದರ್ಶಕರನ್ನು ದಾರಿತಪ್ಪಿಸುವ ಮತ್ತು ಪ್ರಾಣಿಗಳನ್ನು ಅನೈತಿಕವಾಗಿ ನಡೆಸಿಕೊಳ್ಳುವುದಕ್ಕಾಗಿ ಮೃಗಾಲಯದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇದೇ ರೀತಿಯ ಘಟನೆಗಳು ಚೀನಾದಲ್ಲಿ ಈ ಮೊದಲು ಕೂಡ ನಡೆದಿತ್ತು. ಚೀನಾದ ಮೃಗಾಲಯವೊಂದು ನಾಯಿಗಳಿಗೆ ಕಪ್ಪು ಮತ್ತು ಕಿತ್ತಳೆ ಬಣ್ಣದಲ್ಲಿ ಹುಲಿಗಳನ್ನು ಹೋಲುವಂತೆ ಬಣ್ಣ ಹಾಕಿ ಟೀಕೆಗೆ ಗುರಿಯಾಗಿತ್ತು. ಈಜಿಪ್ಟ್ ರಾಜಧಾನಿ ಕೈರೋದ ಮೃಗಾಲಯವೊಂದು ಕತ್ತೆಗಳಿಗೆ ಬಣ್ಣ ಬಳಿದು ಝೀಬ್ರಾದಂತೆ ಪ್ರದರ್ಶಿಸಿ ಅಪಹಾಸ್ಯಕ್ಕೀಡಾಗಿತ್ತು. ಕತ್ತೆಗಳು ಝೀಬ್ರಾದಂತೆ ಕಾಣಲು ಅವುಗಳಿಗೆ ಕಪ್ಪು ಪಟ್ಟಿಗಳನ್ನು ಬಳಿಯಲಾಗಿತ್ತು.
ಪ್ರಾಣಿ ಪ್ರೇಮಿಗಳು ಇಂತಹ ಕ್ರಮಗಳನ್ನು ಬಲವಾಗಿ ಖಂಡಿಸಿದ್ದಾರೆ. ಮೃಗಾಲಯಗಳು ಪ್ರಾಣಿಗಳ ಕಲ್ಯಾಣಕ್ಕಿಂತ ಲಾಭಕ್ಕೆ ಆದ್ಯತೆ ನೀಡುತ್ತವೆ ಎಂದು PETA ಸಂಸ್ಥೆಯು ಟೀಕಿಸಿದೆ.