×
Ad

ಶ್ವೇತಭವನದಲ್ಲಿ ಟ್ರಂಪ್- ಝೆಲೆನ್ಸ್ಕಿ ಮಧ್ಯೆ ಮಾತಿನ ಚಕಮಕಿ; ನಡೆದದ್ದೇನು?

Update: 2025-03-01 07:45 IST

PC: screengrab/x.com/thatsKAIZEN

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ   ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಶ್ವೇತಭವನದಲ್ಲಿ ನಡೆದ ಮಾತುಕತೆಯ ವೇಳೆ ಉಕ್ರೇನ್ ನ ಯುದ್ಧತಂತ್ರ, ಅಮೆರಿಕದ ಮಿಲಿಟರಿ ನೆರವು ಮತ್ತು ಸಂಘರ್ಷ ಕೊನೆಗೊಳಿಸುವ ಪ್ರಯತ್ನಗಳಿಗೆ ಸಂಬಂಧಿಸಿದಂತೆ ಉಭಯ ಗಣ್ಯರ ನಡುವೆ ಮಾತಿನ ಚಕಮಕಿ ನಡೆದಿರುವುದು ಬಹಿರಂಗವಾಗಿದೆ.

ಈ ಚಕಮಕಿಯನ್ನು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಕಟು ಶಬ್ದಗಳಲ್ಲಿ ಖಂಡಿಸಿದ್ದು, ಇದು ಉಕ್ರೇನ್ ಗೆ ಭವಿಷ್ಯದಲ್ಲಿ ಬೆಂಬಲ ಮುಂದುವರಿಸುವ ಸಂಬಂಧ ಉಭಯ ದೇಶಗಳ ನಡುವೆ ಸಂಘರ್ಷ ಹೆಚ್ಚುತ್ತಿರುವುದನ್ನು ತೋರಿಸುತ್ತಿದೆ. ಈ ಸಭೆಯಲ್ಲಿ ಪುಟಿನ್ ಪರವಾಗಿರುವ ತಮ್ಮ ರಾಜತಾಂತ್ರಿಕ ನಿಲುವನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದು, ಶಾಂತಿ ಸಂಧಾನ ನಡೆಸಲು ಉಭಯ ಮುಖಂಡರ ಜತೆ ತೊಡಗಿಸಿಕೊಳ್ಲುವುದು ಅಗತ್ಯ ಎಂದು ಪ್ರತಿಪಾದಿಸಿದರು.

"ನಾನು ಇಬ್ಬರ ಬಗೆಗೂ ಒಲವು ಹೊಂದದಿದ್ದರೆ ಒಪ್ಪಂದ ಏರ್ಪಡಿಸಲಾಗದು. ಪುಟಿನ್ ಬಗ್ಗೆ ನಾನು ವಾಸ್ತವವಾಗಿ ಭಯಾನಕ ಅಂಶಗಳನ್ನು ಹೇಳಬೇಕು ಎಂದು ನೀವು ಬಯಸಿದರೆ, ಒಪ್ಪಂದ ಏರ್ಪಡಿಸಲು ಹೇಗೆ ಸಾಧ್ಯ" ಎಂದು ಟ್ರಂಪ್ ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಝೆಲೆನ್ಸ್ಕಿ, ಈ ಹಿಂದೆ ರಷ್ಯಾ ಜತೆ ನಡೆಸಿದ ಸಂಧಾನ ಮಾತುಕತೆಗಳು ರಷ್ಯಾದ ಅತಿಕ್ರಮಣವನ್ನು ನಿಲ್ಲಿಸುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದರು.

"ಜೆಡಿ, ಇದು ಯಾವ ಬಗೆಯ ರಾಜತಾಂತ್ರಿಕತೆ, ನೀವೇನು ಹೇಳುತ್ತಿದ್ದೀರಿ? ಇದರ ಅರ್ಥವೇನು" ಎಂದು ರಷ್ಯಾ ಈ ಮೊದಲು ಉಲ್ಲಂಘಿಸಿದ ಕದನ ವಿರಾಮವನ್ನು ಉಲ್ಲೇಖಿಸಿ ಜೆಡಿ ವಾನ್ಸ್ ಅವರನ್ನು ಝೆಲೆನ್ಸ್ಕಿ ಪ್ರಶ್ನಿಸುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ.

ರಷ್ಯಾ ಕ್ರಿಮಿಯಾ ಹಾಗೂ ಪೂರ್ವ ಉಕ್ರೇನನ್ನು 2014ರಿಂದ ವಶಪಡಿಸಿಕೊಂಡಿರುವುದನ್ನು ಟ್ರಂಪ್ ಗಮನಕ್ಕೆ ತಂದ ಉಕ್ರೇನ್ ಅಧ್ಯಕ್ಷರು, ರಾಜತಾಂತ್ರಿಕ ಪ್ರಯತ್ನಗಳು ಯುದ್ಧ ನಿಲ್ಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಮೆರಿಕದ ಮಿಲಿಟರಿ ನೆರವಿಗೆ ಝೆಲೆನ್ಸ್ಕಿ ಕೃತಜ್ಞತೆ ಸಲ್ಲಿಸಿದ್ದಾರೆಯೇ ಎಂದು ಜೆಡಿ ವಾನ್ಸ್ ಪ್ರಶ್ನಿಸಿದಾಗ ಈ ಚಕಮಕಿ ನಡೆಯಿತು. ಸಾಕಷ್ಟು ಬಾರಿ ಕೃತಜ್ಞತೆ ಸಲ್ಲಿಸಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಅಮೆರಿಕದ ನೆರವಿನ ಮೇಲೆ ಉಕ್ರೇನ್ ಅತಿಯಾದ ಅವಲಂಬನೆ ಹೊಂದಿದೆ ಎಂದು ಚುಚ್ಚಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News