ಟೊರಂಟೊ ಚಿತ್ರೋತ್ಸವದಿಂದ ‘ಪಂಜಾಬ್ 95' ಸಿನೆಮಾಕ್ಕೆ ಕೊಕ್
Punjab 95 | Photo : ANI
ಟೊರಂಟೊ: ಕೆನಡಾದ ಟೊರಂಟೊದಲ್ಲಿ ನಡೆಯಲಿರುವ ಟೊರಂಟೊ ಅಂತರಾಷ್ಟ್ರೀಯ ಚಿತ್ರೋತ್ಸವ(ಟಿಐಎಫ್ಎಫ್)ನಲ್ಲಿ ಪ್ರದರ್ಶನಕ್ಕೆ ಆಯ್ಕೆಗೊಂಡಿರುವ ಸಿನೆಮಾಗಳ ಪಟ್ಟಿಯಿಂದ ಭಾರತದ ಸಿನೆಮಾ `ಪಂಜಾಬ್ 95' ಅನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.
ಟಿಐಎಫ್ಎಫ್ ವೆಬ್ಸೈಟ್ನಿಂದ ಈ ಸಿನೆಮಾದ ಕುರಿತ ಎಲ್ಲಾ ಉಲ್ಲೇಖವನ್ನೂ(ಸಿನೆಮಾ ಚಿತ್ರೋತ್ಸವಕ್ಕೆ ಆಯ್ಕೆಗೊಂಡ ಬಗ್ಗೆ ಜುಲೈ 24ರ ಟ್ವೀಟ್ ಸಹಿತ) ತೆಗೆದು ಹಾಕಲಾಗಿದೆ. ಬಿಡುಗಡೆಗೂ ಮುನ್ನ ಸಾಕಷ್ಟು ವಿವಾದ ಸೃಷ್ಟಿಸಿರುವ ಈ ಸಿನೆಮದಲ್ಲಿ ಖ್ಯಾತ ಗಾಯಕ-ನಟ ದಿಲ್ಜಿತ್ ದೊಸಾಂಜ್ ಮುಖ್ಯ ಪಾತ್ರ ನಿರ್ವಹಿಸಿದ್ದು ಹನಿ ಟೆಹ್ರಾನ್ ನಿರ್ದೇಶಿಸಿದ್ದಾರೆ.
1995ರಲ್ಲಿ ನಾಪತ್ತೆಯಾಗಿದ್ದ ಪಂಜಾಬ್ ಮೂಲದ ಮಾನವಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಕಾರ್ಲ ಕುರಿತ ಚಿತ್ರ ಇದಾಗಿದೆ. ದಶಕದ ಬಳಿಕ ಜಸ್ವಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ 6 ಪೊಲೀಸರಿಗೆ ಶಿಕ್ಷೆ ವಿಧಿಸಲಾಗಿತ್ತು. ಭಾರತದಲ್ಲಿ ಈ ಸಿನೆಮ ಬಿಡುಗಡೆಗೆ ಸೆನ್ಸಾರ್ ಮಂಡಳಿ ಆಕ್ಷೇಪಿಸಿದ್ದು ಹಲವು ದೃಶ್ಯ, ಸಂಭಾಷಣೆಗೆ ಕತ್ತರಿ ಹಾಕುವಂತೆ ಸೂಚಿಸಿತ್ತು. `ಸಿನೆಮಾದ ಕೆಲವು ಭಾಗಗಳು ಹಿಂಸಾಚಾರವನ್ನು ಪ್ರಚೋದಿಸಬಹುದು ಮತ್ತು ಭಾರತದ ಸಮಗ್ರತೆ ಮತ್ತು ವಿದೇಶಿ ದೇಶಗಳೊಂದಿಗೆ ಅದರ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು' ಎಂದು ಸೆನ್ಸಾರ್ ಮಂಡಳಿ ಹೇಳಿತ್ತು.