×
Ad

ಸಿಪಿಇಸಿ ಮೂಲಸೌಕರ್ಯ ಕಾರ್ಯಕ್ರಮವು ಪಾಕ್ ಜತೆಗಿನ ಸ್ನೇಹದ ಒಡಂಬಡಿಕೆ: ಚೀನಾ ಅಧ್ಯಕ್ಷ

Update: 2023-08-01 22:10 IST

ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್

ಬೀಜಿಂಗ್, ಆ.1: ಚೀನಾವು ತನ್ನ ಸಾರ್ವಕಾಲಿಕ ಮಿತ್ರ ಪಾಕಿಸ್ತಾನದೊಂದಿಗಿನ ಕಾರ್ಯತಂತ್ರದ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಕೆಲಸವನ್ನು ಮುಂದುವರಿಸಲಿದೆ. ಸಿಪಿಇಸಿ ಮೂಲಸೌಕರ್ಯ ಕಾರ್ಯಕ್ರಮವು ಪಾಕ್ ಜತೆಗಿನ ಸ್ನೇಹದ ಒಡಂಬಡಿಕೆಯಾಗಿದೆ ಎಂದು ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಹೇಳಿದ್ದಾರೆ.

ಪಾಕಿಸ್ತಾನದ ಬಲೋಚಿಸ್ತಾನದ ಗ್ವದರ್ ಬಂದರನ್ನು ಚೀನಾದ ಕ್ಸಿನ್‍ಜಿಯಾಂಗ್ ಪ್ರಾಂತಕ್ಕೆ ಜೋಡಿಸುವ ಮಹಾತ್ವಾಕಾಂಕ್ಷೆಯ `ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ಯೋಜನೆಯು ಬೆಲ್ಟ್ ಆ್ಯಂಡ್ ರೋಡ್(ಬಿಆರ್‍ಐ) ಉಪಕ್ರಮದ ಪ್ರಮುಖ ಪ್ರವರ್ತಕ ಯೋಜನೆಯಾಗಿದೆ ಎಂದು ಜಿಂಪಿಂಗ್ ಹೇಳಿದ್ದಾರೆ.

ಆದರೆ ಈ ಯೋಜನೆಯು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಮೂಲಕ ಸಾಗುವ ಕಾರಣ ಭಾರತ ಇದನ್ನು ತೀವ್ರವಾಗಿ ವಿರೋಧಿಸುತ್ತಿದೆ.

60 ಶತಕೋಟಿ ಡಾಲರ್ ಮೊತ್ತದ ಸಿಪಿಇಸಿ ಯೋಜನೆಗೆ ಚಾಲನೆ ದೊರಕಿದ 10ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಪಾಕ್ ರಾಜಧಾನಿ ಇಸ್ಲಮಾಬಾದ್‍ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಜಿಂಪಿಂಗ್ ಪಾಲ್ಗೊಂಡಿದ್ದರು. ಪಾಕಿಸ್ತಾನಕ್ಕೆ ಮೂರು ದಿನಗಳ ಭೇಟಿ ನೀಡಿರುವ ಚೀನಾದ ಉಪಪ್ರೀಮಿಯರ್ ಹಿಲಿಫೆಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. `ಉನ್ನತ ಗುಣಮಟ್ಟದ, ಸುಸ್ಥಿರ ಮತ್ತು ಜೀವನೋಪಾಯವನ್ನು ಹೆಚ್ಚಿಸುವ ಫಲಿತಾಂಶಗಳನ್ನು ಗುರಿಯಾಗಿಟ್ಟುಕೊಂಡು ಚೀನಾವು ಪಾಕ್‍ನೊಂದಿಗೆ ಕೆಲಸ ಮಾಡುತ್ತದೆ ಮತ್ತು ಸಿಪಿಇಸಿಯನ್ನು ಉನ್ನತ ಗುಣಮಟ್ಟದ ಬಿಆರ್‍ಐ ಸಹಕಾರದ ಯೋಜನೆಯನ್ನಾಗಿ ನಿರ್ಮಿಸಲಾಗುವುದು. 2013ರಲ್ಲಿ ಚಾಲನೆ ದೊರಕಿದಂದಿನಿಂದ ಚೀನಾ ಮತ್ತು ವ್ಯಾಪಕವಾದ ಸಮಾಲೋಚನೆ, ಜಂಟಿ ಕೊಡುಗೆ ಮತ್ತು ಹಂಚಿಕೆಯ ಪ್ರಯೋಜನಗಳ ತತ್ವದ ಅಡಿಯಲ್ಲಿ ಸಿಪಿಇಸಿಯನ್ನು ಮುನ್ನಡೆಸಿದೆ ಮತ್ತು ಆರಂಭಿಕ ಯಶಸ್ಸನ್ನು ಸಾಧಿಸಿದೆ' ಎಂದು ಜಿಂಪಿಂಗ್‍ರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಕ್ಸಿನ್‍ಹುವ ಸುದ್ಧಿಸಂಸ್ಥೆ ವರದಿ ಮಾಡಿದೆ.

ಸಿಪಿಇಸಿ ಪಾಕಿಸ್ತಾನದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಹೊಸ ಪ್ರಚೋದನೆಯನ್ನು ನೀಡಿದೆ ಮತ್ತು ಪ್ರಾದೇಶಿಕ ಸಂಪರ್ಕ, ಏಕೀಕರಣಕ್ಕೆ ಉತ್ತಮ ಅಡಿಪಾಯವನ್ನು ಹಾಕಿಕೊಟ್ಟಿದೆ. ಈ ಯೋಜನೆಯು ಚೀನಾ ಮತ್ತು ಪಾಕ್ ನಡುವಿನ ಸಾರ್ವಕಾಲಿಕ ಸ್ನೇಹಕ್ಕೆ ಸ್ಪಷ್ಟ ಪುರಾವೆಯಾಗಿದೆ. ಹೊಸ ಯುಗದಲ್ಲಿ ಉಭಯ ದೇಶಗಳ ಸಮುದಾಯವನ್ನು ಮತ್ತಷ್ಟು ನಿಕಟಗೊಳಿಸುವ ಯೋಜನೆ ಇದಾಗಿದೆ. ಚೀನಾ ಮತ್ತು ಪಾಕ್‍ಗಳು ತಮ್ಮ ಸ್ನೇಹ, ಸಮನ್ವಯ ಅಭಿವೃದ್ಧಿ ಮತ್ತು ಭದ್ರತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಈ ಯೋಜನೆ ಪೂರಕವಾಗಿದೆ ಎಂದು ಜಿಂಪಿಂಗ್ ಹೇಳಿದ್ದಾರೆ.

ಆಗ್ನೇಯ ಏಶ್ಯಾ, ಮಧ್ಯ ಏಶ್ಯಾ, ಗಲ್ಫ್ ಪ್ರದೇಶ, ಆಫ್ರಿಕಾ ಮತ್ತು ಯುರೋಪ್ ಅನ್ನು ಭೂ ಮತ್ತು ಸಮುದ್ರ ಮಾರ್ಗಗಳ ಜಾಲದೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿರುವ ಬಿಆರ್‍ಐ ಉಪಕ್ರಮಕ್ಕೆ 2013ರಲ್ಲಿ ಚೀನಾ ಅಧ್ಯಕ್ಷರು ಚಾಲನೆ ನೀಡಿದ್ದಾರೆ. ಜಗತ್ತಿನಾದ್ಯಂತ ಮೂಲಸೌಕರ್ಯ ಯೋಜನೆಯಲ್ಲಿ ಹೂಡಿಕೆ ಮಾಡಿ ತನ್ನ ಪ್ರಭಾವವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಚೀನಾ ಈ ಯೋಜನೆ ರೂಪಿಸಿದೆ ಎಂದು ಹಲವು ದೇಶಗಳು ಆತಂಕ ವ್ಯಕ್ತಪಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News