×
Ad

ಪಳೆಯುಳಿಕೆ ಇಂಧನ ಬಳಕೆ ಕಡಿತ: ಸಹಮತಕ್ಕೆ ಸಿಒಪಿ28 ಶೃಂಗಸಭೆ ವಿಫಲ

Update: 2023-12-10 22:06 IST

Photo: @COP28_UAE \ X

ದುಬೈ: ದುಬೈಯಲ್ಲಿ ನಡೆದ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಶೃಂಗಸಭೆ(COP28)ಯಲ್ಲಿ ಪಳೆಯುಳಿಕೆ ಇಂಧನವನ್ನು ಹಂತಹಂತವಾಗಿ ರದ್ದುಗೊಳಿಸುವ ಪ್ರಸ್ತಾವನೆಯ ಬಗ್ಗೆ ದೇಶಗಳಲ್ಲಿ ಸಹಮತ ಮೂಡಲಿಲ್ಲ ಎಂದು ವರದಿಯಾಗಿದೆ.

ಕಲ್ಲಿದ್ದಲು, ಕಲ್ಲಿದ್ದಲು ಉತ್ಪನ್ನಗಳು, ನೈಸರ್ಗಿಕ ಅನಿಲ, ಉತ್ಪಾದಿಸಿದ ಅನಿಲ, ಕಚ್ಛಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ನವೀಕರಿಸಲಾಗದ ತ್ಯಾಜ್ಯಗಳಂತಹ ನವೀಕರಿಸಲಾಗದ ಇಂಧನ ಮೂಲಗಳನ್ನು ಪಳೆಯುಳಿಕೆ ಇಂಧನ ಎಂದು ಕರೆಯಲಾಗುತ್ತದೆ.

ಪಳೆಯುಳಿಕೆ ಇಂಧನ ಕಡಿತದ ಬಗ್ಗೆ ಶೃಂಗಸಭೆಯ ಅಂತಿಮ ನಿರ್ಣಯದಲ್ಲಿ ಯಾವುದೇ ಉಲ್ಲೇಖ ಮಾಡುವುದಕ್ಕೆ ಪ್ರಮುಖ ತೈಲ ಉತ್ಪಾದಕ ದೇಶಗಳಾದ ಸೌದಿ ಅರೆಬಿಯಾ ಮತ್ತು ರಶ್ಯ ವಿರೋಧ ವ್ಯಕ್ತಪಡಿಸಿದ್ದು ನಿರ್ದಿಷ್ಟವಾಗಿ ತೈಲ, ಅನಿಲ ಮತ್ತು ಕಲ್ಲಿದ್ದಲನ್ನು ಗುರಿಯಾಗಿಸುವ ಬದಲು, ಸಾಮಾನ್ಯ ಅರ್ಥದಲ್ಲಿ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರ ಮೇಲೆ ಗಮನ ಹರಿಸಬೇಕೆಂದು ಪ್ರತಿಪಾದಿಸಿವೆ. ಶೃಂಗಸಭೆಯ ಅಂತಿಮ ನಿರ್ಣಯದಲ್ಲಿ ಪಳೆಯುಳಿಕೆ ಇಂಧನಗಳ ಬಗ್ಗೆ ಯಾವುದೇ ಉಲ್ಲೇಖವನ್ನು ವಜಾಗೊಳಿಸುವ ನಿಲುವನ್ನು ಬೆಂಬಲಿಸುವಂತೆ ಕೋರುವ ಪತ್ರವನ್ನು ತನ್ನ ಸದಸ್ಯರು ಮತ್ತು ಮಿತ್ರರಾಷ್ಟ್ರಗಳಿಗೆ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ‘ಒಪೆಕ್’ ನೀಡಿತ್ತು ಎಂದು ಮೂಲಗಳು ಹೇಳಿವೆ.

ಹೈಡ್ರೋಕಾರ್ಬನ್ ಸೇರಿದಂತೆ ಎಲ್ಲಾ ರೀತಿಯ ಇಂಧನದಲ್ಲಿ ಗಮನಾರ್ಹ ಹೂಡಿಕೆಯನ್ನು ಒಪೆಕ್ ಪ್ರತಿಪಾದಿಸಿದ್ದು ಕೇವಲ ಅಂತರ್ಗತ ಇಂಧನದ ಪರಿವರ್ತನೆಯ ಅಗತ್ಯವನ್ನು ಒತ್ತಿಹೇಳಿದೆ. ಇದಕ್ಕೆ ವ್ಯತಿರಿಕ್ತವಾಗಿ ಅಮೆರಿಕ, ಯುರೋಪಿಯನ್ ಯೂನಿಯನ್, ಇತರ ಕೆಲವು ದೇಶಗಳ ಸಹಿತ ಕನಿಷ್ಟ 80 ದೇಶಗಳ ಒಕ್ಕೂಟವು ಪಳೆಯುಳಿಕೆ ಇಂಧನ ಬಳಕೆಯ ಅಂತಿಮ ನಿರ್ಮೂಲನೆಗೆ ಸ್ಪಷ್ಟ ಬದ್ಧತೆಯನ್ನು ಪ್ರತಿಪಾದಿಸಿದೆ.

‘ಸಣ್ಣ ದ್ವೀಪದೇಶಗಳ ಒಕ್ಕೂಟ’ದ ಪರವಾಗಿ ವಾದ ಮಂಡಿಸಿದ ಮಾರ್ಷಲ್ ದ್ವೀಪಸಮೂಹ, ಪಳೆಯುಳಿಕೆ ಇಂಧನದಿಂದ ಉಂಟಾಗುವ ಅಸ್ತಿತ್ವದ ಅಪಾಯ (ವಿಶೇಷವಾಗಿ ಸಮುದ್ರ ಮಟ್ಟದ ಏರಿಕೆಯ ಅಪಾಯದಲ್ಲಿರುವ ತಗ್ಗುಪ್ರದೇಶದ ರಾಷ್ಟ್ರಗಳಿಗೆ)ವನ್ನು ಒತ್ತಿಹೇಳಿತು. ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಶಿಯಸ್ ಗೆ ತಾಪಮಾನ ಏರಿಕೆಯನ್ನು ಸೀಮಿತಗೊಳಿಸುವ ಜಾಗತಿಕ ಗುರಿಯನ್ನು ಸಾಧಿಸಲು ಒಕ್ಕೂಟ ಒತ್ತಾಯಿಸಿದೆ. ಈ ಗುರಿ ಸಾಧನೆಗೆ ಪಳೆಯುಳಿಕೆ ಇಂಧನಗಳನ್ನು ಹಂತಹಂತವಾಗಿ ರದ್ದುಗೊಳಿಸುವ ಅಗತ್ಯವಿದೆ.

ದೇಶಗಳು ರಚನಾತ್ಮಕ ಧೋರಣೆಯೊಂದಿಗೆ ಭಾಗವಹಿಸಬೇಕು ಎಂದು ಜರ್ಮನಿಯ ಹವಾಮಾನ ಪ್ರತಿನಿಧಿ ಜೆನ್ನಿಫರ್ ಮೋರ್ಗನ್ ಒತ್ತಾಯಿಸಿದರು. ನವೀಕರಿಸಬಹುದಾದ ಇಂಧನ ಗುರಿಗಳನ್ನು ಉತ್ತೇಜಿಸುವ ಸಂದರ್ಭದಲ್ಲಿ ಪಳೆಯುಳಿಕೆ ಇಂಧನ ಸಬ್ಸಿಡಿಗಳನ್ನು ಕೊನೆಗೊಳಿಸುವ ಬಲವಾದ ಬದ್ಧತೆಯ ಅಗತ್ಯವನ್ನು ಸಣ್ಣ ದ್ವೀಪದೇಶಗಳ ಒಕ್ಕೂಟ ಒತ್ತಿಹೇಳಿದೆ.

ಈ ಶೃಂಗಸಭೆಯ ಫಲಿತಾಂಶವು ಜಾಗತಿಕ ಇಂಧನ ಮತ್ತು ಹವಾಮಾನ ನೀತಿಯ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಭಾರತ, ಚೀನಾ ಸೇರಿದಂತೆ ಇತರ ದೇಶಗಳು ಸಿಒಪಿ28ರಲ್ಲಿ ಪಳೆಯುಳಿಕೆ ಇಂಧನವನ್ನು ಹಂತಹಂತವಾಗಿ ಕಡಿಮೆಗೊಳಿಸುವ ಪ್ರಸ್ತಾಪವನ್ನು ಸ್ಪಷ್ಟವಾಗಿ ಅನುಮೋದಿಸಲಿಲ್ಲ, ಆದರೆ ನವೀಕರಿಸಬಹುದಾದ ಇಂಧನವನ್ನು ಹೆಚ್ಚಿಸುವ ಕರೆಯನ್ನು ಬೆಂಬಲಿಸಿವೆ.

ಹೊರಸೂಸುವಿಕೆ ಪ್ರಮಾಣ ಕಡಿತಕ್ಕೆ ವಿಶ್ವಸಂಸ್ಥೆ ಆಗ್ರಹ

ಇಂಗಾಲ ಹೊರಸೂಸುವಿಕೆ ಪ್ರಮಾಣದಲ್ಲಿ ಭಾರೀ ಕಡಿತ ಮಾಡಲು ಮತ್ತು ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಶಿಯಸ್ ಮಿತಿಯನ್ನು ದಾಟುವುದನ್ನು ತಡೆಯುವ ಪ್ರಸ್ತಾವನೆಯನ್ನು ಒಪ್ಪುವಂತೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಜಾಗತಿಕ ಮುಖಂಡರನ್ನು ಆಗ್ರಹಿಸಿದ್ದಾರೆ.

ದುಬೈಯಲ್ಲಿ ನಡೆಯುತ್ತಿರುವ ಸಿಒಪಿ28 ಶೃಂಗಸಭೆಯಲ್ಲಿ ಮಾತನಾಡಿದ ಗುಟೆರಸ್ ‘ಪ್ರತಿಜ್ಞೆಗಳ ಹೊರತಾಗಿಯೂ ಹೊರಸೂಸುವಿಕೆ ದಾಖಲೆ ಮಟ್ಟದಲ್ಲಿದೆ ಮತ್ತು ಇದಕ್ಕೆ ಪಳೆಯುಳಿಕೆ ಇಂಧನಗಳು ಪ್ರಮುಖ ಕಾರಣಗಳಾಗಿವೆ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News