"ಅಪ್ಪ ಗಾಝಾಗೆ ಹೋಗುತ್ತಿದ್ದಾರೆ, ಇದೇ ಕೊನೆಯ ಆಯ್ಕೆ": ತಮ್ಮ ಪುಟ್ಟ ಮಗುವಿಗೆ ಭಾವುಕವಾಗಿ ಹೇಳಿದ ಪತ್ರಕರ್ತ ಯೂಸುಫ್ ಉಮರ್
ಗಾಝಾದ ದಿಗ್ಭಂಧನಕ್ಕೆ ಅಂತ್ಯ ಹಾಡಲು ಹಾಯಿದೋಣಿ ಏರಲಿರುವ ಪತ್ರಕರ್ತ ಯೂಸುಫ್
PC : Yusuf Omar \ Facebook
ಲಂಡನ್, ಆ. 26: ಗಾಝಾದ ದಿಗ್ಭಂಧನ ಮುರಿದು ಅಗತ್ಯ ಆಹಾರ, ನೀರು ಹಾಗೂ ಔಷಧಿಗಳನ್ನು ತಲುಪಿಸುವ ಉದ್ದೇಶದಿಂದ ಪ್ರಶಸ್ತಿ ವಿಜೇತ ಲಂಡನ್ ಮೂಲದ ಪತ್ರಕರ್ತ ಯೂಸುಫ್ ಉಮರ್ ಹಾಯಿದೋಣಿ ಏರಲಿದ್ದಾರೆ.
ಇಸ್ರೇಲ್ ನಡೆಸುತ್ತಿರುವ ಯುದ್ಧ ಹಾಗೂ ದೀರ್ಘಕಾಲದ ಆಕ್ರಮಣದ ವಿರುದ್ಧ ಜಾಗತಿಕ ಮಟ್ಟದಲ್ಲಿ ನಡೆದ ಪ್ರತಿಭಟನೆಗಳು, ಮನವಿಗಳು ಹಾಗೂ ಸಾಮಾಜಿಕ ಮಾಧ್ಯಮ ಅಭಿಯಾನಗಳು ಫಲಪ್ರದವಾಗದ ಹಿನ್ನೆಲೆಯಲ್ಲಿ ಈ ಹೆಜ್ಜೆಯನ್ನು ಅವರು “ಕೊನೆಯ ಆಯ್ಕೆ” ಎಂದು ವಿವರಿಸಿದ್ದಾರೆ.
ಫೆಲೆಸ್ತೀನ್ ಪರ ಪ್ರತಿಭಟನೆಯ ವೇಳೆ ಭಾವುಕರಾದ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ತಮ್ಮ ಪುಟ್ಟ ಮಗುವನ್ನು ಕೈಯಲ್ಲಿ ಎತ್ತಿಕೊಂಡು ಭಾವುಕರಾಗಿ, ಆಕ್ರೋಶಿತರಾಗಿ ಇಸ್ರೇಲ್ ಮುತ್ತಿಗೆ ಹಾಕಿದ ಪ್ರದೇಶಕ್ಕೆ ನೆರವು ತಲುಪಿಸಲು ಜೀವ ಪಣಕ್ಕಿಡುವ ನಿರ್ಧಾರದ ಹಿನ್ನೆಲೆಯನ್ನು ಹಂಚಿಕೊಂಡಿದ್ದಾರೆ.
"ಅಪ್ಪ ಈ ವಾರ ಗಾಝಾಗೆ ಹೋಗುತ್ತಿದ್ದಾರೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಫೆಲೆಸ್ತೀನ್ ಮೇಲಿನ ದಿಗ್ಭಂಧನ ತೆಗೆಯಲು ಧ್ವನಿ ಎತ್ತುತ್ತಿದ್ದಾರೆ. 77 ವರ್ಷಗಳ ಆಕ್ರಮಣ ಮತ್ತು ವರ್ಣಭೇದ ನೀತಿಗಳ ವಿರುದ್ಧ ಹೋರಾಟವನ್ನು ನಿದ್ದೆಯಿಲ್ಲದೇ ಕಳೆದಿದ್ದೇವೆ. ನಾವು ನರಮೇಧದಿಂದ ಬೇಸತ್ತಿದ್ದೇವೆ” ಎಂದು ಉಮರ್ ತಮ್ಮ ಮಗುವಿಗೆ ಹೇಳಿದ್ದಾರೆ.
ಗಾಝಾದವರ ನೋವನ್ನು ಎಲ್ಲರ ಎದೆ ತಟ್ಟಲು, ಇತ್ತಿಚೆಗೆ ನಡೆಸಿದ ಜಾಗತಿಕ ಮನವಿಗಳು, ಪ್ರತಿಭಟನೆಗಳು ಮತ್ತು ಅಭಿಯಾನಗಳು ಫಲಕಾರಿಯಾಗದ ಹಿನ್ನೆಲೆಯಲ್ಲಿ ಈ ಮಾರ್ಗವನ್ನು ತೆಗೆದುಕೊಂಡಿದ್ದೇನೆ ಎಂದು ಯೂಸುಫ್ ಉಮರ್ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
“ಈ ಹಾಯಿದೋಣಿಯಲ್ಲಿ ಗಾಝಾಗೆ ಹೋಗುವುದನ್ನು ಬಿಟ್ಟು ಇನ್ನೇನು ಮಾಡಬಹುದು? ಹಾದಿಯಲ್ಲಿನ ಅಪಾಯಗಳ ಬಗ್ಗೆ ನನಗೆ ಸಂಪೂರ್ಣ ಅರಿವು ಇದೆ. ನನಗಿಬ್ಬರು ಮಕ್ಕಳಿದ್ದಾರೆ. ಈ ಸಂದರ್ಭದಲ್ಲಿ ನಾವು ಮೌನವಾಗಿ ಕುಳಿತುಕೊಳ್ಳಲಿಲ್ಲ, ನಮಗಿರುವ ಶಕ್ತಿಯಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದ್ದೇವೆ ಎಂದು ನಾಳೆ ಅವರಿಗೆ ನಾನು ಹೇಳಲು ಬಯಸುತ್ತೇನೆ”, ಎಂದು ಅವರು ತಮ್ಮ ದೃಢ ನಿರ್ಧಾರದ ಬಗ್ಗೆ ಹಂಚಿಕೊಂಡಿದ್ದಾರೆ.
ಗಾಝಾದ ಮಕ್ಕಳ ನೋವು ಇಡೀ ಜಗತ್ತಿಗೆ ಎಚ್ಚರಿಕೆಯ ಸಂದೇಶ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ಇಂದು ಗಾಝಾದ ಮಕ್ಕಳು ಅನುಭವಿಸುತ್ತಿರುವಂತೆಯೇ, ನಾಳೆ ಪ್ರಪಂಚದ ಮಕ್ಕಳು ಬಳಲಬಹುದು. ಹಿಂಸಾಚಾರವು ಮಾನವನ ಹಕ್ಕುಗಳನ್ನು ನಿರಾಕರಿಸುತ್ತದೆ ಮತ್ತು ಜಾಗತಿಕ ಒಗ್ಗಟ್ಟನ್ನು ಮುರಿಯುತ್ತದೆ. ಈ ಕುರಿತು ನಾವು ಎಚ್ಚರ ವಹಿಸಬೇಕು,” ಎಂದು ಉಮರ್ ಒತ್ತಿ ಹೇಳಿದ್ದಾರೆ.
“ನಾನು ಈ ಹಾಯಿ ದೋಣಿಯನ್ನು ಹತ್ತುತ್ತಿರುವುದು, ಪ್ರಪಂಚದ ಬೇರೆ ಯುವಕರಿಗೂ ಧ್ವನಿ ಎತ್ತಲು ಪ್ರೇರಣೆಯಾಗಬಹುದು. ಅವರೆಲ್ಲರೂ ಒಗ್ಗಟ್ಟಿನಿಂದ ನಿಂತರೆ, ಇಸ್ರೇಲ್ ಹೇಗೆ ಪ್ರತಿಕ್ರಿಯಿಸುತ್ತದೆ?” ಎಂದು ಯೂಸುಫ್ ಉಮರ್ ಖಾರವಾಗಿ ಪ್ರಶ್ನಿಸಿದ್ದಾರೆ. ಆ ಮೂಲಕ ತಾವು ಇತರರಿಗೆ ಮಾದರಿಯಾಗುವ ಬಯಕೆ ವ್ಯಕ್ತಪಡಿಸಿದರು.
ಆಹಾರ, ನೀರು ಮತ್ತು ಔಷಧೋಪಚಾರದ ತೀವ್ರ ಕೊರತೆಯಿಂದ ಬಳಲುತ್ತಿರುವ ಲಕ್ಷಾಂತರ ಗಾಝಾದ ಜನತೆಯ ಮೇಲಿನ ದಿಗ್ಬಂಧನವನಕ್ಕೆ ಅಂತ್ಯ ಹಾಡಲು, ಮಾನವೀಯ ನೆರವಿನಿಂದ ತುಂಬಿದ ಈ ಹಾಯಿದೋಣಿಯು ಅಂತರರಾಷ್ಟ್ರೀಯ ಸಮುದಾಯದ ಗಮನಸೆಳೆಯುವ ಯತ್ನದ ಪ್ರಮುಖ ಭಾಗವಾಗಿದೆ.
ಸಂಘರ್ಷ ವಲಯಗಳಲ್ಲಿ ವರದಿ ಮಾಡುವ ಅನುಭವ ಹೊಂದಿರುವ ಯೂಸುಫ್ ಉಮರ್, ತಮ್ಮ ಯಾನದ ಅಪಾಯವನ್ನು ಒಪ್ಪಿಕೊಂಡರೂ, “ಮೌನ ಇನ್ನು ಮುಂದೆ ಒಂದು ಆಯ್ಕೆಯಲ್ಲ” ಎಂದು ದೃಢ ಸಂಕಲ್ಪ ಮಾಡಿದ್ದಾರೆ.
“ನಾವು ಬೇರೆ ಎಲ್ಲವನ್ನೂ ಪ್ರಯತ್ನಿಸಿದ್ದೇವೆ. ಉಳಿದಿರುವುದು ಇಷ್ಟೇ,” ಎಂದ ಉಮರ್ ತಮ್ಮ ಕೊನೆಯ ಪ್ರಯತ್ನಕ್ಕೆ ಹೊರಟಿದ್ದಾರೆ.