ವಿಶ್ವಾಸಮತದಲ್ಲಿ ಸೋಲು, ಫ್ರಾನ್ಸ್ ಸರ್ಕಾರ ಪತನ
PC: x.com/oluwakso
ಪ್ಯಾರೀಸ್: ಫ್ರಾನ್ಸ್ ಪ್ರಧಾನಿ ಫ್ರಾಂಕೋಯಿಸ್ ಬೇರೂ ಮಂಡಿಸಿದ್ದ ವಿಶ್ವಾಸಮತಕ್ಕೆ ಸಂಸತ್ತಿನಲ್ಲಿ ಸೋಮವಾರ ಸೋಲು ಉಂಟಾಗುವ ಮೂಲಕ ಒಂಬತ್ತು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿದ್ದ ಸರ್ಕಾರ ಪತತಗೊಂಡಿದೆ. ಇದೀಗ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಹೊಸ ಪ್ರಧಾನಿಯನ್ನು ನೇಮಕ ಮಾಡಬೇಕಿದ್ದು, ದೇಶದಲ್ಲಿ ಹೊಸ ರಾಜಕೀಯ ಅನಿಶ್ಚಿತತೆಗೆ ಕಾರಣವಾಗಿದೆ.
ಒಂಬತ್ತು ತಿಂಗಳಿಂದ ಅಧಿಕಾರದಲ್ಲಿದ್ದ ಬೇರೂ ಮಂಡಿಸಿದ ಸುಮಾರು 44 ಶತಕೋಟಿ ಯೂರೊ (52 ಶತಕೋಟಿ ಡಾಲರ್) ಸರ್ಕಾರಿ ವೆಚ್ಚ ಕಡಿತಗೊಳಿಸುವ ಪ್ರಸ್ತಾವವನ್ನು ಒಳಗೊಂಡ ಬಜೆಟ್ಗೆ ಮಿತ್ರಪಕ್ಷಗಳಿಂದಲೇ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸದನದಲ್ಲಿ ವಿಶ್ವಾಸಮತ ಪಡೆಯುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಫ್ರಾನ್ಸ್ನ ಸಾಲದ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಬೇರೂ ಈ ಪ್ರಸ್ತಾಪ ಮುಂದಿಟ್ಟಿದ್ದರು.
ಅವಿಶ್ವಾಸ ನಿರ್ಣಯದ ಬದಲು ವಿಶ್ವಾಸಮತಕ್ಕೆ ಸೋಲು ಉಂಟಾಗಿ ಪ್ರಧಾನಿಯೊಬ್ಬರು ಪದಚ್ಯುತರಾಗುತ್ತಿರುವುದು ಆಧುನಿಕ ಫ್ರಾನ್ಸ್ ಇತಿಹಾಸದಲ್ಲೇ ಮೊದಲು. ಮಂಗಳವಾರ ಬೇರೂ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ನಿಕಟವರ್ತಿಗಳು ಹೇಳಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ 364 ಡೆಪ್ಯುಟಿಗಳು ಸರ್ಕಾರದ ಮೇಲೆ ತಮಗೆ ವಿಶ್ವಾಸವಿಲ್ಲ ಎಂದು ಮತ ಚಲಾಯಿಸಿದರೆ 194 ಮಂದಿ ಮಾತ್ರ ಸರ್ಕಾರದ ಪರವಾಗಿ ಮತ ಚಲಾಯಿಸಿದರು. ಸಂವಿಧಾನದ 50ನೇ ವಿಧಿ ಅನ್ವಯ ಪ್ರಧಾನಿ ತಮ್ಮ ಸರ್ಕಾರದ ರಾಜೀನಾಮೆಯನ್ನು ಸಲ್ಲಿಸಬೇಕಿದೆ ಎಂದು ಸ್ಪೀಕರ್ ಯೇಲ್ ಬ್ರೂನ್ ಪೈವೆಟ್ ಸೂಚಿಸಿದರು.