×
Ad

ಆಂಗ್ ಸೂಕಿಗೆ ವೈದ್ಯಕೀಯ ಆರೈಕೆ ನಿರಾಕರಣೆ: ಆರೋಪ

Update: 2023-09-14 22:23 IST

ಆಂಗ್‍ಸಾನ್ ಸೂಕಿಯ Photo: twitter/OfficialSuuKyi

ಯಾಂಗಾನ್: ಮ್ಯಾನ್ಮಾರ್‍ ನ ಸೇನಾಡಳಿತವು ಜೈಲಿನಲ್ಲಿರುವ ಪ್ರಜಾಪ್ರಭುತ್ವವಾದಿ ನಾಯಕಿ ಆಂಗ್‍ಸಾನ್ ಸೂಕಿಯ ಜೀವಕ್ಕೆ ಅಪಾಯವುಂಟು ಮಾಡುತ್ತಿದ್ದು ಅವರು ಆಹಾರ ಮತ್ತು ಸೂಕ್ತ ವೈದ್ಯಕೀಯ ಆರೈಕೆಯಿಂದ ವಂಚಿತರಾಗಿದ್ದಾರೆ ಎಂದು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ(ಎನ್‍ಎಲ್‍ಡಿ) ಪಕ್ಷ ಹೇಳಿದೆ.

2021ರಲ್ಲಿ ಸೂಕಿ ನೇತೃತ್ವದ ಎನ್‍ಎಲ್‍ಡಿಯನ್ನು ಪದಚ್ಯುತಗೊಳಿಸಿದ್ದ ಸೇನೆಯು ಆಡಳಿತವನ್ನು ಕೈವಶ ಮಾಡಿಕೊಂಡು ಸೂಕಿ ವಿರುದ್ಧ ಹಲವು ಪ್ರಕರಣ ದಾಖಲಿಸಿ ಜೈಲಿನಲ್ಲಿರಿಸಿದೆ. 78 ವರ್ಷದ ಸೂಕಿ ದಂತ ಸೋಂಕಿನಿಂದ ನರಳುತ್ತಿದ್ದು ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ ಎಂದು ಇತ್ತೀಚೆಗೆ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. `ಆರೋಗ್ಯ ಹದಗೆಟ್ಟಿರುವ ಸೂಕಿಗೆ ಸೂಕ್ತ ವೈದ್ಯಕೀಯ ಆರೈಕೆ ಹಾಗೂ ಆರೋಗ್ಯಕರ ಆಹಾರವನ್ನು ಒದಗಿಸುತ್ತಿಲ್ಲ. ಅವರ ಜೀವವನ್ನು ಅಪಾಯಕ್ಕೆ ಒಡ್ಡುವುದು ಇದರ ಹಿಂದೆ ಇರುವ ಏಕೈಕ ಉದ್ದೇಶವಾಗಿದೆ. ಅವರ ಜೀವಕ್ಕೆ ಅಪಾಯವಾದರೆ ಅದಕ್ಕೆ ಸೇನಾಡಳಿತವೇ ಹೊಣೆಯಾಗಲಿದೆ' ಎಂದು ಎನ್‍ಎಲ್‍ಡಿ ಹೇಳಿದೆ.

ಸೂಕಿಯನ್ನು ರಹಸ್ಯಸ್ಥಳದಲ್ಲಿ ಒತ್ತೆಯಾಳಾಗಿ ಇರಿಸಲಾಗಿದ್ದು ಅವರನ್ನು ಹಾಗೂ ಇತರ ರಾಜಕೀಯ ಕೈದಿಗಳನ್ನು ತಕ್ಷಣ ಬಿಡುಗಡೆಗೊಳಿಸಲು ಅಂತರಾಷ್ಟ್ರೀಯ ಸಮುದಾಯ ಒತ್ತಡ ಹೇರಬೇಕು ಎಂದು ಪಕ್ಷವು ಆಗ್ರಹಿಸಿದೆ.

ಸೇನಾ ನ್ಯಾಯಾಲಯದಲ್ಲಿ 19 ತಿಂಗಳು ನಡೆದ ವಿಚಾರಣಾ ಪ್ರಕ್ರಿಯೆಯಲ್ಲಿ ಸೂಕಿ ಅನಾರೋಗ್ಯದಿಂದ ಪಾಲ್ಗೊಂಡಿರಲಿಲ್ಲ. ಕಳೆದ ವರ್ಷ ಮುಕ್ತಾಯಗೊಂಡ ವಿಚಾರಣೆಯಲ್ಲಿ ಅವರಿಗೆ 33 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ತನ್ನ ತಾಯಿಗೆ ಸೇನಾಡಳಿತ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸುತ್ತಿಲ್ಲ ಎಂದು ಬ್ರಿಟನ್‍ನಲ್ಲಿರುವ ಸೂಕಿಯ ಪುತ್ರ ಕಳೆದ ವಾರ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೇನಾಡಳಿತದ ವಕ್ತಾರ ಮಿನ್ ಟುನ್, ಸೂಕಿಯ ಅನಾರೋಗ್ಯದ ಕುರಿತ ವರದಿ ಕೇವಲ ವದಂತಿ. ಅವರು ಆರೋಗ್ಯವಾಗಿದ್ದು ವೈದ್ಯರು ಕಾಳಜಿ ವಹಿಸಿಸುತ್ತಿದ್ದಾರೆ ಎಂದಿದ್ದಾರೆ. ಕ್ಷಿಪ್ರದಂಗೆಯ ಮೂಲಕ ಅಧಿಕಾರ ವಶಪಡಿಸಿಕೊಂಡ ಬಳಿಕ ಸೇನಾಡಳಿತ 24,000ಕ್ಕೂ ಅಧಿಕ ಜನರನ್ನು ಬಂಧನದಲ್ಲಿರಿಸಿದೆ ಎಂದು ಸ್ಥಳೀಯ ಎನ್‍ಜಿಒ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News