ಡೊನಾಲ್ಡ್ ಟ್ರಂಪ್ ರ ಎಐ ಚಾಲಿತ ‘ಟ್ರಂಪ್ ಗಾಝಾ’ ವೀಡಿಯೊ ವಿರುದ್ಧ ಭುಗಿಲೆದ್ದ ಜಾಗತಿಕ ಆಕ್ರೋಶ
PC : X
ವಾಶಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುದ್ಧಪೀಡಿತ ಗಾಝಾ, ‘ಟ್ರಂಪ್ ಗಾಝಾ’ ಎಂಬ ಮಹಾನಗರವಾಗಿ ರೂಪಾಂತರಗೊಳ್ಳುವ ಕಾಲ್ಪನಿಕ ವಿಡಿಯೊ ತುಣಕೊಂದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಅವರ ಈ ನಡೆಯ ವಿರುದ್ಧ ಜಾಗತಿಕ ಆಕ್ರೋಶ ಭುಗಿಲೆದ್ದಿದೆ.
ವೈಭವ, ವಿಚಿತ್ರ ದೃಶ್ಯ ಕಲ್ಪನೆ ಹಾಗೂ ಸ್ವಯಂ ವೈಭವೀಕರಣದ ಸಂಕೇತವನ್ನು ಹೊಂದಿರುವ ಈ ವಿಡಿಯೊ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಗಾಝಾ ಪ್ರಾಂತ್ಯದಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿರುವ ಹೊತ್ತಿನಲ್ಲಿ ಇದು ಅಸೂಕ್ಷ್ಮ, ಆಕ್ಷೇಪಾರ್ಹ ಹಾಗೂ ಕಿವುಡುತನದ ಪರಮಾವಧಿ ಎಂಬ ಆಕ್ರೋಶ ವ್ಯಕ್ತವಾಗಿದೆ.
ಡೊನಾಲ್ಡ್ ಟ್ರಂಪ್ ರ ಪೋಸ್ಟ್ ಅನ್ನು ತಮ್ಮ ಫೇಸ್ ಬುಕ್ ನಲ್ಲಿ ತೀವ್ರವಾಗಿ ಖಂಡಿಸಿರುವ ಖ್ಯಾತ ಪತ್ರಕರ್ತೆ ಫಾಯೆ ಡಿಸೋಜ, ಇದು ಜಾಗತಿಕ ನಾಯಕರೊಬ್ಬರ ಅಭೂತಪೂರ್ವ ಅಸಡ್ಡೆಯ ನಡವಳಿಕೆ ಎಂದು ಟೀಕಿಸಿದ್ದಾರೆ.
“ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ಆ ವಿಡಿಯೊ ಅವರ ಬಂಗಾರದ ಪ್ರತಿಮೆ, ಆಕಾಶದಿಂದ ಉದುರುವ ಹಣ ಹಾಗೂ ಗಡ್ಡಧಾರಿ ಬೆಲ್ಲಿ ನರ್ತಕರೊಂದಿಗೆ ಮುಕ್ತಾಯಗೊಳ್ಳುತ್ತದೆ. ಈ ಹಿಂದೆ ಜಾಗತಿಕ ರಾಜಕಾರಣದ ಇತಿಹಾಸದಲ್ಲಿ ಯಾವುದೇ ದೇಶದ ಮುಖ್ಯಸ್ಥನೂ ವಿಶ್ವದೆದುರು ಹೀಗೆ ವರ್ತಿಸಿರಲಿಲ್ಲ. ಆ ವಿಡಿಯೊ ಹಂಚಿಕೊಳ್ಳುದವುದು ತೀರಾ ಆಕ್ಷೇಪಾರ್ಹವಾಗಿರುವುದರಿಂದ, ನಾನದನ್ನು ಇಲ್ಲಿ ಮರು ಹಂಚಿಕೊಳ್ಳುತ್ತಿಲ್ಲ” ಎಂದು ಅವರು ಬರೆದುಕೊಂಡಿದ್ದಾರೆ.
ಈ ಕೃತಕ ಬುದ್ಧಿಮತ್ತೆ ಚಾಲಿತ ವಿಡಿಯೊವು ಹಸಿರು ಬಣ್ಣದ ದಪ್ಪ ಅಕ್ಷರಗಳಲ್ಲಿ ‘ಗಾಝಾ 2025’ ಎಂಬ ಶೀರ್ಷಿಕೆಯೊಂದಿಗೆ ಹಾಲಿ ಗಾಝಾದಲ್ಲಿನ ಭಗ್ನಗೊಂಡ ಕಟ್ಟಡಗಳು, ವಿಧ್ವಂಸಗಳನ್ನೊಳಗೊಂಡ ದಾರುಣ ದೃಶ್ಯದೊಂದಿಗೆ ಪ್ರಾರಂಭಗೊಳ್ಳುತ್ತದೆ. ಇದರ ನಂತರ, “ಮುಂದೇನು?’ ಎಂಬ ಕೆಂಪು ಮತ್ತು ನೀಲಿ ಬಣ್ಣದ ನುಡಿಗಟ್ಟು ಕಾಣಿಸಿಕೊಂಡು, ಗಾಝಾ ಪ್ರಾಂತ್ಯಕ್ಕಾಗಿ ಟ್ರಂಪ್ ರ ಸಂಭವನೀಯ ಭವಿಷ್ಯದ ಯೋಜನೆಗಳೇನು ಎಂಬುದರ ಕುರಿತು ಸುಳಿವು ನೀಡುತ್ತದೆ.
ವಿಡಿಯೊ ಮುಂದುವರಿದಂತೆ, ವಿನಾಶಗೊಂಡಿರುವ ಭೂದೃಶ್ಯದವು ಕ್ಷಿಪ್ರವಾಗಿ ಗಗನಚುಂಬಿ ಕಟ್ಟಡಗಳು, ವೈಭವೋಪೇತ ಹೋಟೆಲ್ ಗಳು, ಐಷಾರಾಮಿ ರೆಸಾರ್ಟ್ ಗಳು, ಸ್ಪೋರ್ಟ್ಸ್ ಕಾರುಗಳು, ನೈಟ್ ಕ್ಲಬ್ ಗಳು ಹಾಗೂ ಮನಮೋಹಕ ಸಮುದ್ರ ತೀರಗಳನ್ನು ಹೊಂದಿರುವ ಪ್ರದೇಶವಾಗಿ ರೂಪಾಂತರಗೊಳ್ಳುತ್ತದೆ.
ಈ ದೃಶ್ಯದ ಹಿನ್ನೆಲೆಯಲ್ಲಿ “ಡೊನಾಲ್ಡ್ ಟ್ರಂಪ್ ನಿಮ್ಮನ್ನು ಸ್ವತಂತ್ರಗೊಳಿಸಲಿದ್ದಾರೆ. ಇನ್ನು ಯಾವುದೇ ಸುರಂಗಗಳಿರುವುದಿಲ್ಲ, ಯಾವುದೇ ಭಯವಿರುವುದಿಲ್ಲ. ಅಂತಿಮವಾಗಿ ಟ್ರಂಪ್ ಗಾಝಾ ಇಲ್ಲಿದೆ” ಎಂಬ ಸಾಹಿತ್ಯ ಹೊಂದಿರುವ ಗೀತೆ ಕೇಳಿ ಬರುತ್ತದೆ. ಈ ಗೀತೆ ಮತ್ತಷ್ಟು ಉತ್ಪ್ರೇಕ್ಷಿತ ಪ್ರತಿಪಾದನೆಯೊಂದಿಗೆ ಮುಂದುವರಿದು, ಈ ಕಾಲ್ಪನಿಕ ಬೆಳವಣಿಗೆಯನ್ನು ಬಂಗಾರದ ಹಾಗೂ ಹೊಚ್ಚ ಹೊಸ ಮಾದರಿ ಎಂದು ಬಣ್ಣಿಸುತ್ತದೆ. ಈ ವೇಳೆ ಮಗುವೊಂದು ಟ್ರಂಪ್ ಮುಖವನ್ನು ಹೊಂದಿರುವ ಬಂಗಾರದ ಬಲೂನು ಹಿಡಿದುಕೊಂಡಿರುವ ದೃಶ್ಯಸ ತೆರೆಯ ಮೇಲೆ ಮೂಡುತ್ತದೆ.
ಈ ಅಸಂಗತ ದೃಶ್ಯಕ್ಕೆ ಕಳಶವಿಟ್ಟಂತೆ, ವ್ಯಕ್ತಿಯೊಬ್ಬ ಹಣವನ್ನು ಆಕಾಶಕ್ಕೆ ಚಿಮ್ಮುವ, ಆ ಹಣವನ್ನು ಸಂಗ್ರಹಿಸಲು ಮಕ್ಕಳು ಮುಗಿಬೀಳುವ ದೃಶ್ಯವನ್ನು ಈ ವಿಡಿಯೊ ಹೊಂದಿದೆ. ಇದರೊಂದಿಗೆ ಸಮುದ್ರ ತೀರದಲ್ಲಿ ಐಷಾರಾಮಿ ನೌಕೆಗಳು ಹಾಗೂ ನಗರದ ನಡುವೆ ಟ್ರಂಪ್ ರ ಬೃಹತ್ ಬಂಗಾರದ ಪ್ರತಿಮೆ ಎದ್ದು ನಿಂತಿರುವ ದೃಶ್ಯವನ್ನೂ ಈ ವಿಡಿಯೊ ಒಳಗೊಂಡಿದೆ.
ವಿಡಿಯೊ ಮುಂದುವರಿದಂತೆ, ಹಿನ್ನೆಲೆಯಲ್ಲಿ ಆಕಾಶದಿಂದ ಹಣ ಸುರಿಯುವಾಗ, ಟೆಸ್ಲಾ ಸಿಇಒ ಎಲಾನ್ ಮಸ್ಕ್ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರ, ಚಡ್ಡಿ ತೊಟ್ಟಿರುವ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಾಕ್ ಟೇಲ್ ಹೀರುತ್ತಿರುವ ದೃಶ್ಯದೊಂದಿಗೆ ವಿಡಿಯೊ ಮುಕ್ತಾಯಗೊಳ್ಳುತ್ತದೆ.
ಟ್ರಂಪ್ ರ ಇನ್ಸ್ಟಾಗ್ರಾಮ್ ಪೋಸ್ಟ್ ಈ ವಿಡಿಯೊಗೆ ಯಾವುದೇ ಶೀರ್ಷಿಕೆಯನ್ನು ನೀಡಿರದಿದ್ದರೂ, ತಕ್ಷಣವೇ ಅದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಟ್ರಂಪ್ ರ ಗಾಝಾ ಚಿತ್ರಣದ ಬಗ್ಗೆ ಸಾಮಾಜಿಕ ಮಾಧ್ಯೇಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾವಿರಾರು ಮಂದಿ ಮೃತಪಟ್ಟು, ಅಸಂಖ್ಯಾತ ಮನೆಗಳು ನೆಲಸಮವಾಗಿರುವ ಯುದ್ಧಪೀಡಿತ ಗಾಝಾ ಬಗೆಗಿನ ಟ್ರಂಪ್ ರ ಈ ನಡವಳಿಕೆ ತೀವ್ರ ಆಕ್ಷೇಪಾರ್ಹ ಹಾಗೂ ಅಸಹ್ಯಕರವಾಗಿದೆ ಎಂದು ಹಲವಾರು ಮಂದಿ ಖಂಡಿಸಿದ್ದಾರೆ.
“ಪ್ರಿಯ ಡೊನಾಲ್ಡ್, ಗಾಝಾ ಮಾರಾಟಕ್ಕಿಲ್ಲ. ಅದು ಫೆಲೆಸ್ತೀನಿಯನ್ನರಿಗೆ ಸೇರಿದ್ದು” ಎಂದು ಓರ್ವ ಬಳಕೆದಾರರು ಪ್ರತಿಕ್ರಿಯಿಸಿದ್ದರೆ, “ಇದು ಅಧ್ಯಕ್ಷರೊಬ್ಬರು ಇದುವರೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅತ್ಯಂತ ಅಸಹ್ಯಕರ ಸಂಗತಿಯಾಗಿದೆ” ಎಂದು ಮತ್ತೊಬ್ಬ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2024ರ ಅಮೆರಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ರನ್ನು ಬೆಂಬಲಿಸಿದ್ದ ಅವರ ಹಲವಾರು ಬೆಂಬಲಿಗರೂ ಕೂಡಾ ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದು, “ಇದು ಭಯಾನಕ.. ನಾವು ಇದಕ್ಕಾಗಿಯಲ್ಲ ನಿಮಗೆ ಮತ ಚಲಾಯಿಸಿದ್ದು” ಎಂದು ಓರ್ವ ಬಳಕೆದಾರರು ಆಕ್ಷೇಪಿಸಿದ್ದಾರೆ.
ಟ್ರಂಪ್ ರ ಟೀಕಾಕಾರರೂ ಕೂಡಾ ಅವರ ವಿಡಿಯೊದಲ್ಲಿನ ಬಾಲಿಶತನದತ್ತ ಬೊಟ್ಟು ಮಾಡಿದ್ದಾರೆ. ಓರ್ವ ಬಳಕೆದಾರರು, “ಸರಿ, ಬಹುಶಃ ನಾನು ಕಮಲಾರಿಗೆ ಮತ ಚಲಾಯಿಸಬೇಕಿತ್ತು” ಎಂದು 2024ರ ಚುನಾವಣೆಯಲ್ಲಿ ಟ್ರಂಪ್ ಎದುರು ಪರಾಭವಗೊಂಡ ಕಮಲಾ ಹ್ಯಾರಿಸ್ ಅವರನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ.
ಫೆಬ್ರವರಿ 4ರಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರೊಂದಿಗೆ ನಡೆಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸುದೀರ್ಘ ಕಾಲದ ಅಮೆರಿಕ ನಿಯಂತ್ರಿತ ಗಾಝಾ ಮರು ಅಭಿವೃದ್ಧಿಯ ಪ್ರಸ್ತಾವನೆಯನ್ನು ಟ್ರಂಪ್ ಪ್ರಕಟಿಸಿದ್ದ ಬೆನ್ನಿಗೇ ಈ ವಿಡಿಯೊ ಹೊರಬಿದ್ದಿದೆ.
ಈ ವೇಳೆ, “ನಾವು ಗಾಝಾವನ್ನು ವಶಕ್ಕೆ ಪಡೆಯುತ್ತೇವೆ ಹಾಗೂ ಆ ಸ್ಥಳದಲ್ಲಿರುವ ಎಲ್ಲ ಸ್ಫೋಟಗೊಳ್ಳದ ಅಪಾಯಕಾರಿ ಬಾಂಬ್ ಗಳು ಹಾಗೂ ಆಯುಧಗಳನ್ನು ನಿಷ್ಕ್ರಿಯಗೊಳಿಸುವ ಹೊಣೆಗಾರಿಕೆ ಹೊತ್ತುಕೊಳ್ಳುತ್ತೇವೆ. ನಾವು ಎಲ್ಲ ಹಾನಿಗೊಳಗಾಗಿರುವ ಕಟ್ಟಡಗಳನ್ನು ನೆಲಸಮಗೊಳಿಸುತ್ತೇವೆ ಹಾಗೂ ಆ ಪ್ರದೇಶದ ಜನರಿಗೆ ಅನಿಯಮಿತ ಸಂಖ್ಯೆಯ ಉದ್ಯೋಗಾವಕಾಶ ಹಾಗೂ ವಸತಿಯನ್ನು ಒದಗಿಸುವ ಆರ್ಥಿಕ ಅಭಿವೃದ್ಧಿಯನ್ನು ಸೃಷ್ಟಿಸುತ್ತೇವೆ” ಎಂದು ಅವರು ಘೋಷಿಸಿದ್ದರು.
ಡೊನಾಲ್ಡ್ ಟ್ರಂಪ್ ರ ಈ ಪ್ರಸ್ತಾವಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ನೆತನ್ಯಾಹು, “ಈ ಕ್ರಮವು ಇತಿಹಾಸವನ್ನು ಬದಲಿಸಬಲ್ಲದು” ಎಂದು ಶ್ಲಾಘಿಸಿದ್ದರು. ಆದರೆ, ಈ ಪ್ರಸ್ತಾವಕ್ಕೆ ಜಗತ್ತಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೊಂದು ಸಾಮ್ರಾಜ್ಯಶಾಹಿ ಹಾಗೂ ಫೆಲೆಸ್ತೀನಿಯನ್ನರ ಸಾರ್ವಭೌಮತ್ವವನ್ನು ನಿರಾಕರಿಸುವ ಪ್ರಸ್ತಾವ ಎಂದು ಹಲವಾರು ಸರಕಾರಗಳು ಖಂಡಿಸಿದ್ದವು.
ಟರ್ಕಿ, ಫ್ರಾನ್ಸ್, ರಶ್ಯ, ಚೀನಾ, ಸ್ಪೇನ್, ಐರ್ಲೆಂಡ್ ಹಾಗೂ ಬ್ರಿಟನ್ ಸೇರಿದಂತೆ ಹಲವಾರು ದೇಶಗಳು ಟ್ರಂಪ್ ರ ದೃಷ್ಟಿಕೋನವನ್ನು ತಿರಸ್ಕರಿಸಿದ್ದವು ಹಾಗೂ ಎರಡು ರಾಷ್ಟ್ರಗಳ ಪರಿಹಾರದ ಬಗೆಗಿನ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದವು.
ಇಂತಹ ನಡೆಯಿಂದ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಅಸ್ಥಿರತೆ ತಲೆದೋರಬಹುದು ಎಂದು ಫ್ರಾನ್ಸ್ ಎಚ್ಚರಿಸಿದರೆ, ಟ್ರಂಪ್ ರ ಪ್ರಸ್ತಾವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಟರ್ಕಿ ತಳ್ಳಿ ಹಾಕಿತ್ತು.
ಟ್ರಂಪ್ ರ ಪ್ರಸ್ತಾವವನ್ನು ಹಾಸ್ಯಾಸ್ಪದ ಮತ್ತು ಅಸಂಬದ್ಧ ಎಂದು ತಳ್ಳಿ ಹಾಕಿದ್ದ ಹಮಾಸ್ ಸೇರಿದಂತೆ ಫೆಲೆಸ್ತೀನ್ ಗುಂಪುಗಳು, ಇಂತಹ ಉಪಕ್ರಮದಿಂದ ಈ ಪ್ರಾಂತ್ಯದಲ್ಲಿನ ಉದ್ವಿಗ್ನತೆ ಮತ್ತಷ್ಟು ಭುಗಿಲೇಳಲಿದೆ ಎಂದು ಎಚ್ಚರಿಸಿದ್ದವು.
ತಮ್ಮ ಪೋಸ್ಟ್ ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಟ್ರಂಪ್ ತಮ್ಮ ವಿಡಿಯೊವನ್ನು ಅಳಿಸಿಯೂ ಇಲ್ಲ ಅಥವಾ ತಮ್ಮ ವಿರುದ್ಧ ಹೆಚ್ಚುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆಯನ್ನೂ ನೀಡಿಲ್ಲ.