ಫೆಲೆಸ್ತೀನ್ ಗುರುತಿಸುವಿಕೆ ಹಮಾಸ್‍ಗೆ ಪುರಸ್ಕಾರ ನೀಡಿದಂತಾಗುತ್ತದೆ : ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್, ಸೆ.23: ಬ್ರಿಟನ್‍ನಂತಹ ದೇಶಗಳು ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸುವುದರಿಂದ ಹಮಾಸ್ ಅನ್ನು ಪುರಸ್ಕರಿಸಿದಂತಾಗುತ್ತದೆ ಎಂಬುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಲುವಾಗಿದೆ ಎಂದು ಶ್ವೇತಭವನ ಸೋಮವಾರ ಹೇಳಿದೆ.
ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸುವ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಧಾರವನ್ನು ಅಧ್ಯಕ್ಷರು ಒಪ್ಪುವುದಿಲ್ಲ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯರೊಲಿನ್ ಲೆವಿಟ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಇಂತಹ ನಿರ್ಧಾರಗಳು ಗಾಝಾದಲ್ಲಿನ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವಲ್ಲಿ ಅಥವಾ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ ಎಂಬುದನ್ನು ಇತ್ತೀಚೆಗೆ ಬ್ರಿಟನ್ ಪ್ರಧಾನಿ ಸ್ಟಾರ್ಮರ್ ರನ್ನು ಭೇಟಿಯಾದಾಗ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ ಎಂದು ಲೆವಿಟ್ ಹೇಳಿರುವುದಾಗಿ ವರದಿಯಾಗಿದೆ. ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಮತ್ತು ಪೋರ್ಚುಗಲ್‍ಗಳು ಫೆಲೆಸ್ತೀನ್ ರಾಷ್ಟ್ರವನ್ನು ಅಧಿಕೃತವಾಗಿ ಗುರುತಿಸಿವೆ.