ಉಕ್ರೇನ್-ರಷ್ಯಾ ಯುದ್ಧ ಕೊನೆಗೊಳಿಸುವ ಬಗ್ಗೆ ಯಾವುದೇ ಒಪ್ಪಂದ ನಡೆದಿಲ್ಲ: ಪುಟಿನ್ ಜೊತೆಗಿನ ಮಾತುಕತೆ ಬಳಿಕ ಟ್ರಂಪ್ ಹೇಳಿಕೆ
ವ್ಲಾದಿಮಿರ್ ಪುಟಿನ್ ಮತ್ತು ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್ : ಉಕ್ರೇನ್-ರಷ್ಯಾ ಕದನ ವಿರಾಮ ಮತ್ತು ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಅಲಾಸ್ಕಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆದಿದೆ. ಆದರೆ ಸಭೆಯು ಯಾವುದೇ ಗಮನಾರ್ಹ ಫಲಿತಾಂಶವಿಲ್ಲದೆ ಅಂತ್ಯವಾಗಿದೆ ಎಂದು ಹೇಳಲಾಗಿದೆ. ಶೃಂಗಸಭೆಯಲ್ಲಿ ಉಕ್ರೇನ್-ರಷ್ಯಾ ಯುದ್ಧ ಕೊನೆಗೊಳಿಸುವ ಬಗ್ಗೆ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ವ್ಲಾದಿಮಿರ್ ಪುಟಿನ್ ಅಲಾಸ್ಕಾದಲ್ಲಿ ಸುಮಾರು 2.5 ಗಂಟೆಗಳ ಸುದೀರ್ಘ ಸಮಾಲೋಚನೆ ನಡೆಸಿದರು. 1945ರ ನಂತರದ ಯುರೋಪಿನ ಅತಿದೊಡ್ಡ ಭೂ ಯುದ್ಧವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ಅಥವಾ ವಿರಾಮಗೊಳಿಸಲು ಸೇರಿದ್ದ ಅಲಸ್ಕಾ ಶೃಂಗಸಭೆ ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿದೆ ಎಂದು ತಿಳಿದು ಬಂದಿದೆ.
ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಉಭಯ ದೇಶಗಳ ನಾಯಕರು ಮಾತನಾಡಿದ್ದಾರೆ. ಆದರೆ ಉಕ್ರೇನ್-ರಷ್ಯಾ ನಡುವಣ ಕದನ ವಿರಾಮ ಘೋಷಣೆ ಆಗಲಿದೆಯೇ ಎಂಬ ಬಗ್ಗೆ ಇಬ್ಬರೂ ನಾಯಕರು ಏನನ್ನೂ ಹೇಳಿಲ್ಲ. ಯುದ್ಧದ ಕುರಿತು ಯಾವುದೇ ಮಾಹಿತಿ ನೀಡದೆ, ಮಾತುಕತೆಗಳ ವಿವರಗಳನ್ನು ಹಂಚಿಕೊಳ್ಳದೆ ಟ್ರಂಪ್ ಮತ್ತು ಪುಟಿನ್ ಜಂಟಿ ಪತ್ರಿಕಾಗೋಷ್ಠಿಯನ್ನು ಕೊನೆಗೊಳಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್-ರಷ್ಯಾ ಯುದ್ಧವನ್ನು ನಿಲ್ಲಿಸುವ ಬಗ್ಗೆ ಯಾವುದೇ ಒಪ್ಪಂದಕ್ಕೆ ತಲುಪಿಲ್ಲ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮತ್ತು ನ್ಯಾಟೋ ನಾಯಕರ ಸಭೆಯನ್ನು ಕರೆಯುವುದಾಗಿ ಹೇಳಿದರು.
ಆದರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು, ಇಬ್ಬರ ಮಧ್ಯೆ “ಒಂದು ಅರ್ಥ ಮಾಡಿಕೊಳ್ಳುವಿಕೆ” ನಡೆದಿದೆ ಎಂದು ತಿಳಿಸಿದರು. ಇಬ್ಬರು ನಾಯಕರು ಸಭೆಯಲ್ಲಿ ಏನು ಚರ್ಚೆ ನಡೆಸಿದರು ಎಂಬುದರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.