×
Ad

ನಾಗರಿಕರ ಸಾವು-ನೋವು ಕನಿಷ್ಟಗೊಳಿಸುವ ಪ್ರಯತ್ನ ವಿಫಲ: ಇಸ್ರೇಲ್ ಪ್ರಧಾನಿ ನೆತನ್ಯಾಹು

Update: 2023-11-17 22:38 IST

ಬೆಂಜಮಿನ್ ನೆತನ್ಯಾಹು | Photo: PTI

ಟೆಲ್‍ಅವೀವ್ : ಗಾಝಾದ ಮೇಲಿನ ದಾಳಿಯಲ್ಲಿ ಫೆಲೆಸ್ತೀನಿಯನ್ ನಾಗರಿಕರ ಸಾವು-ನೋವನ್ನು ಕನಿಷ್ಟಗೊಳಿಸುವ ಪ್ರಯತ್ನ ವಿಫಲವಾಗಿದೆ. ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವುದಕ್ಕೆ ಹಮಾಸ್ ಅಡ್ಡಿಪಡಿಸಿರುವುದು ಇದಕ್ಕೆ ಕಾರಣ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ಹೇಳಿದ್ದಾರೆ.

`ಸುಮಾರು 6 ವಾರಗಳಿಂದ ಮುಂದುವರಿದಿರುವ ಹಮಾಸ್ ವಿರುದ್ಧದ ಯುದ್ಧದಲ್ಲಿ ಸಾವಿರಾರು ಫೆಲೆಸ್ತೀನೀಯರು ಇಸ್ರೇಲ್ ದಾಳಿಯಲ್ಲಿ ಹತರಾಗಿರುವುದು ಹೊಸ ಪೀಳಿಗೆಯ ಜನತೆಯಲ್ಲಿ ದ್ವೇಷವನ್ನು ಪ್ರಚೋದಿಸಲಿದೆಯೇ? ಎಂದು ಅಮೆರಿಕದ ಸಿಬಿಎಸ್ ನ್ಯೂಸ್ ಟಿವಿ ಚಾನೆಲ್‍ನ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನೆತನ್ಯಾಹು `ಇಸ್ರೇಲ್ ದಾಳಿಯಲ್ಲಿ ಫೆಲೆಸ್ತೀನ್ ನಾಗರಿಕರ ಸಾವು-ನೋವು ಹೆಚ್ಚಲು ಹಮಾಸ್ ಕಾರಣ. ಯಾವುದೇ ನಾಗರಿಕರ ಸಾವು-ನೋವು ಒಂದು ದುರಂತವಾಗಿದೆ ಮತ್ತು ನಾವು ಇದನ್ನು ಬಯಸಿಲ್ಲ. ನಾಗರಿಕರನ್ನು ಅಪಾಯದ ಸ್ಥಳದಿಂದ ಹೊರತರಲು ಸಾಧ್ಯವಿರುವುದೆಲ್ಲವನ್ನೂ ಮಾಡಿದ್ದೇವೆ. ಆದರೆ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವುದಕ್ಕೆ ಹಮಾಸ್ ಅಡ್ಡಿಯಾಗಿತ್ತು' ಎಂದರು.

ಹಮಾಸ್ ಅನ್ನು ನಾಶಗೊಳಿಸುವುದು ತನ್ನ ಮಿಲಿಟರಿ ಕಾರ್ಯಾಚರಣೆಯ ಪ್ರಮುಖ ಗುರಿ ಎಂದು ಇಸ್ರೇಲ್ ಹೇಳಿದೆ. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ನೆತನ್ಯಾಹು `ಹಮಾಸ್‍ಗೆ ಫೆಲೆಸ್ತೀನೀಯರ ಸುರಕ್ಷತೆಯ ಬಗ್ಗೆ ಕಾಳಜಿಯಿಲ್ಲ. ಆದರೆ ನಮಗೆ ನಾಗರಿಕರ ಸಾವು ನೋವು ಕನಿಷ್ಟವಾಗಿರಬೇಕು ಎಂಬ ಕಾಳಜಿಯಿದೆ. ಆದರೆ ದುರದೃಷ್ಟವಶಾತ್ ಇದರಲ್ಲಿ ವಿಫಲವಾಗಿದ್ದೇವೆ' ಎಂದರು.

ಗಾಝಾದ ಅಲ್-ಶಿಫಾ ಆಸ್ಪತ್ರೆಯ ಮೇಲಿನ ಇಸ್ರೇಲ್ ದಾಳಿ ಮತ್ತು ಇದಕ್ಕೆ ವ್ಯಕ್ತವಾದ ಜಾಗತಿಕ ಖಂಡನೆಯ ಬಗ್ಗೆ ಪ್ರತಿಕ್ರಿಯಿಸಿದ ನೆತನ್ಯಾಹು `ಹಮಾಸ್‍ನ ವಶದಲ್ಲಿರುವ ಒತ್ತೆಯಾಳುಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂಬ ಬಲವಾದ ಸೂಚನೆಯಿತ್ತು.  ಆದ್ದರಿಂದಲೇ ನಾವು ಆಸ್ಪತ್ರೆಯನ್ನು ಪ್ರವೇಶಿಸಿದೆವು. ಆದರೆ ಅವರು ಅಲ್ಲಿ ಇರಲಿಲ್ಲ. ಆಸ್ಪತ್ರೆಯಲ್ಲಿ ಹಮಾಸ್‍ನ ಶಸ್ತ್ರಾಸ್ತ್ರ ಸಂಗ್ರಹ ಹಾಗೂ ಗುಪ್ತ ಕಾರ್ಯಾಚರಣೆ ಕೇಂದ್ರ ಪತ್ತೆಯಾಗಿದೆ' ಎಂದರು. ಗಾಝಾದಲ್ಲಿ ಯುದ್ಧವಿರಾಮ ಜಾರಿಗೆ ಸಂಬಂಧಿಸಿ ನಡೆಯುತ್ತಿರುವ ಮಾತುಕತೆ, ಒಪ್ಪಂದದ ಅನುಸಾರ ಫೆಲೆಸ್ತೀನಿಯನ್ ಕೈದಿಗಳ ಬಿಡುಗಡೆ ನಡೆಸುವಿರಾ ಎಂಬ ಪ್ರಶ್ನೆಗೆ `ಕೆಲವು ವಿಷಯಗಳನ್ನು ನಾವು ಬಹಿರಂಗಪಡಿಸುವಂತಿಲ್ಲʼ ಎಂದಷ್ಟೇ ಉತ್ತರಿಸಿದರು.     

 

ಅಮೆರಿಕ ಹೇಳಿಕೆಗೆ ಹಮಾಸ್ ಖಂಡನೆ

ಅಲ್-ಶಿಫಾ ಆಸ್ಪತ್ರೆಯನ್ನು ಹಮಾಸ್ ಮಿಲಿಟರಿ ಉದ್ದೇಶಕ್ಕೆ ಬಳಸುತ್ತಿದೆ ಎಂಬ ಪೆಂಟಗಾನ್ ಮತ್ತು ಅಮೆರಿಕದ ವಿದೇಶಾಂಗ ಇಲಾಖೆಯ ಹೇಳಿಕೆಯನ್ನು ಹಮಾಸ್ ಖಂಡಿಸಿದೆ. `ಇದು ಆಕ್ರಮಣಕಾರಿ ಸೈನ್ಯದ ವಕ್ತಾರನ ದುರ್ಬಲ ಮತ್ತು ಹಾಸ್ಯಾಸ್ಪದ ಸುಳ್ಳು ಹೇಳಿಕೆಯ ಪುನರಾವರ್ತನೆಯಾಗಿದೆ' ಎಂದು ಹಮಾಸ್ ಹೇಳಿದೆ.

`ಅಲ್-ಶಿಫಾ ಆಸ್ಪತ್ರೆಯಲ್ಲಿ ಹಮಾಸ್ ಚಟುವಟಿಕೆಗಳ ಬಗ್ಗೆ ತನ್ನದೇ ಆದ ಗುಪ್ತಚರ ಸಂಸ್ಥೆಗಳ ಪರಿಶೀಲನೆಯಲ್ಲಿ ಅಮೆರಿಕಕ್ಕೆ ವಿಶ್ವಾಸವಿದೆ ಮತ್ತು ಇದನ್ನು ಹಂಚಿಕೊಳ್ಳುವುದಿಲ್ಲ ಅಥವಾ ವಿವರಿಸುವುದಿಲ್ಲ' ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಗುರುವಾರ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News