ಇಂಪಾಗಿ ಹಾಡಿದ ಮಹಿಳೆಯನ್ನು ವಾಪಾಸು ಹೋಗದಂತೆ ತಡೆದ ಆನೆ; ವಿಡಿಯೊ ವೈರಲ್
PC: x.com/ndtv
ಆನೆಗಾಗಿ ಇಂಪಾಗಿ ಹಾಡಿದ ಮಹಿಳೆಯನ್ನು ಆನೆಯೊಂದು ಮೆದುವಾಗಿ ತನ್ನ ಸೊಂಡಿಲಿನಿಂದ ಸುತ್ತಿ ಹೋಗದಂತೆ ತಡೆದ ಹೃದಯಸ್ಪರ್ಶಿ ವಿಡಿಯೊವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೇವ್ ಎಲಿಫೆಂಟ್ ಫೌಂಡೇಷನ್ ನ ಸಂಸ್ಥಾಪಕಿ ಲೆಕ್ ಚೈಲೆರ್ಟ್ ಈ ವಿಡಿಯೊ ಶೇರ್ ಮಾಡಿದ್ದಾರೆ. ಆನೆಗಾಗಿ ಲೆಕ್ ಚೈಲರ್ಟ್ ಮೆಲುದನಿಯಲ್ಲಿ ಹಾಡಿದಾಗ ಆನೆ ಆತ್ಮೀಯವಾಗಿ ಆಕೆಯನ್ನು ಸೊಂಡಿಲಿನಿಂದ ಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
"ನನ್ನ ಹಾಡನ್ನು ಆಸ್ವಾದಿಸಿದ ಆನೆ ಎಷ್ಟರ ಮಟ್ಟಿಗೆ ಎಷ್ಟರ ಮಟ್ಟಿಗೆ ತಲ್ಲೀನತೆಯಿಂದ ಸಂಗೀತ ಆಲಿಸಿತು ಎಂದರೆ ನಾನು ಅಲ್ಲಿಂದ ಹೊರಹೋಗಲು ಅವಕಾಶ ನೀಡಲಿಲ್ಲ" ಎಂದು ಲೆಕ್ ಚೈಲರ್ಟ್ ಹೇಳಿದ್ದಾರೆ.
"ಪ್ರತಿ ಸಂಜೆಯೂ ಆರಾಮದ ಸಮಯ. ಮರದ ನೆರಳಿನಲ್ಲಿ ಆನೆಗಳ ಹಿಂಡು ಸೇರುತ್ತವೆ. ಅವುಗಳ ಜತೆ ಪ್ರಶಾಂತವಾಗಿ ಸಮಯ ಕಳೆಯುವ ಕ್ಷಣ ಅದು" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಪೋಸ್ಟ್ ಮಾಡಲಾಗಿದೆ. ಹಾಡು ಆನೆಗಳಿಗೆ ಸಂತಸ ನೀಡುವುದು ಮಾತ್ರವಲ್ಲದೇ ಅವುಗಳ ಹೃದಯವನ್ನು ಮೃದುವಾಗಿಸುವಲ್ಲೂ ನೆರವಾಗುತ್ತಿದೆ ಎಂದು ಅವರು ಬಣ್ಣಿಸಿದ್ದಾರೆ.
"ಆನೆಗಳ ಫೇವರಿಟ್ ಅಂಶವೆಂದರೆ ನನ್ನ ಜತೆಗೆ ನಿಲ್ಲುವುದು ಮತ್ತು ಹಾಡು ಕೇಳುವುದು; ಅದರಲ್ಲೂ ಮುಖ್ಯವಾಗಿ ಫಾ ಮಾಯಿ ಎಂಬ ಆನೆ. ಅದು ಸಂತೋಷದಿಂದ ಸಂಗೀತ ಆಸ್ವಾದಿಸುತ್ತಾ ನನ್ನನ್ನು ಹೋಗಲು ಬಿಡುವುದಿಲ್ಲ. ನಾನು ಅಲ್ಲೇ ನಿಂತಿರಬೇಕು ಎಂದು ಬಯಸುತ್ತದೆ. ಆನೆಯ ಫೇವರಿಟ್ ಹಾಡು ಕೊನೆಗೊಳಿಸುವವರೆಗೂ ಬಿಡುವುದಿಲ್ಲ" ಎಂದು ಹೇಳಿದ್ದಾರೆ.