×
Ad

ಇಸ್ರೇಲ್ ಮಾನವ ಹಕ್ಕುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ : ಯುರೋಪಿಯನ್ ಒಕ್ಕೂಟ

Update: 2025-06-25 20:19 IST

Pc | Olivier Hoslet/EPA

ಬ್ರಸೆಲ್ಸ್ : ಗಾಝಾ ಮತ್ತು ವೆಸ್ಟ್‌ಬ್ಯಾಂಕ್‌ನಲ್ಲಿ ಇಸ್ರೇಲ್ ಮಾನವ ಹಕ್ಕುಗಳ ಕುರಿತು ತನ್ನ ಬದ್ಧತೆಗಳನ್ನು ಉಲ್ಲಂಘಿಸಿದೆ ಎಂದು ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥೆ ಕಾಜಾ ಕಲ್ಲಾಸ್ ಹೇಳಿದ್ದಾರೆ.

ಫೆಲೆಸ್ತೀನ್ ನಾಗರಿಕರ ಸ್ಥಿತಿಗತಿ ಸುಧಾರಿಸದಿದ್ದರೆ ಇಸ್ರೇಲ್‌ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಯುರೋಪಿಯನ್ ಒಕ್ಕೂಟ ಜುಲೈನಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಸಲಿದೆ ಎಂದು ಕಾಜಾ ಕಲ್ಲಾಸ್ ಹೇಳಿದ್ದಾರೆ.

ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥೆ ಕಾಜಾ ಕಲ್ಲಾಸ್ ಅವರು ಇಸ್ರೇಲ್ ಜೊತೆಗಿನ ಒಪ್ಪಂದದ ಪರಿಶೀಲನೆ ಬಗ್ಗೆ ವರದಿ ಮಂಡಿಸಿದ ನಂತರ ಇಸ್ರೇಲ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧಾರವನ್ನು ಜುಲೈವರೆಗೆ ಮುಂದೂಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಅತ್ಯಂತ ಮುಖ್ಯವಾದ ವಿಷಯವೆಂದರೆ ಅಲ್ಲಿನ ವಾಸ್ತವ ಪರಿಸ್ಥಿತಿ, ಫೆಲೆಸ್ತೀನ್ ಜನರ ಜೀವನವನ್ನು ಸುಧಾರಿಸುವುದಾಗಿದೆ. ನಾವು ಪ್ರತಿದಿನ ಅಲ್ಲಿ ನೋಡುತ್ತಿರುವ ದುಃಖ ಮತ್ತು ಮಾನವ ಹತ್ಯಾಕಾಂಡವನ್ನು ನಿಲ್ಲಿಸುವುದಾಗಿದೆ ಎಂದು ಹೇಳಿದ್ದಾರೆ.

ಗಾಝಾದಲ್ಲಿ ಇಸ್ರೇಲ್ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಯುರೋಪಿಯನ್ ಒಕ್ಕೂಟದ ವರದಿಯು ತಿಳಿಸಿತ್ತು. ಇಸ್ರೇಲ್ ಜೊತೆಗೆ ಮಾಡಿಕೊಂಡಿರುವ ಪ್ರಮುಖ ವ್ಯಾಪಾರ ಒಪ್ಪಂದ ಹಾಗೂ ಸಂಬಂಧವನ್ನು ಮುಂದುವರಿಸುವ ಬಗ್ಗೆ ಚರ್ಚೆ ನಡೆದಿತ್ತು.

ಇಸ್ರೇಲ್‌ನ ಸಾಂಪ್ರದಾಯಿಕ ನಿಕಟ ಮಿತ್ರ ರಾಷ್ಟ್ರವಾದ ನೆದರ್ಲ್ಯಾಂಡ್ ಸೇರಿದಂತೆ ಯುರೋಪಿಯನ್ ಒಕ್ಕೂಟದ 17 ಸದಸ್ಯ ರಾಷ್ಟ್ರಗಳು ಗಾಝಾದಲ್ಲಿ ಇಸ್ರೇಲ್‌ನ ಮಿಲಿಟರಿ ಕ್ರಮಗಳು ಮತ್ತು ದಿಗ್ಬಂಧನದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

ಯುರೋಪಿಯನ್ ಒಕ್ಕೂಟದ ʼವಿದೇಶಾಂಗ ನೀತಿ ಸೇವೆʼ ಸಿದ್ಧಪಡಿಸಿದ ವರದಿಯು ಇಸ್ರೇಲ್ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಹೇಳಿತ್ತು. ವಿದೇಶಾಂಗ ನೀತಿ ವಿಭಾಗದ ಮುಖ್ಯಸ್ಥೆ ಕಾಜಾ ಕಲ್ಲಾಸ್ ಅವರು ಈ ವರದಿಯನ್ನು ಸೋಮವಾರ ಯುರೋಪಿಯನ್ ಒಕ್ಕೂಟದ ಸಭೆಯಲ್ಲಿ ಮಂಡಿಸಿದ್ದರು.

ಸೋಮವಾರದ ಸಭೆಯಲ್ಲಿ ಸ್ಪೇನ್ ಇಸ್ರೇಲ್ ಜೊತೆಗಿನ ಒಪ್ಪಂದವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಕರೆ ನೀಡಿತ್ತು. ಬೆಲ್ಜಿಯಂ, ಐರ್ಲೆಂಡ್ ಮತ್ತು ಸ್ವೀಡನ್ ಕ್ರಮದ ಅಗತ್ಯವನ್ನು ಹೇಳಿತ್ತು.

ಸ್ಪೇನ್‌ನ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬಾರೆಸ್, ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳು ಇಸ್ರೇಲ್ ಜೊತೆ ಮುಕ್ತವಾಗಿ ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ.

ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್-ನೋಯೆಲ್ ಬ್ಯಾರಟ್ ಮಾತನಾಡುತ್ತಾ, ಯುರೋಪಿಯನ್ ಒಕ್ಕೂಟದ ಒಪ್ಪಂದದ ಎರಡನೇ ವಿಧಿಯನ್ನು ಇಸ್ರೇಲ್ ಸ್ಪಷ್ಟವಾಗಿ ಉಲ್ಲಂಘಿಸಿದೆ. ಮುಂದಿನ ತಿಂಗಳು ನಡೆಯುವ ಸಭೆಯಲ್ಲಿ ಸಚಿವರು ಈ ಕುರಿತು ಉತ್ತರಿಸಬೇಕಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News