×
Ad

ಅಕ್ರಮ ವಲಸಿಗರ ತೆರವು ಖಚಿತ: ಪಾಕ್ ಸರಕಾರ

Update: 2023-10-07 22:37 IST

ಇಸ್ಲಮಾಬಾದ್ : ಅಕ್ಟೋಬರ್ 31ರ ಒಳಗೆ ಸುಮಾರು 1.7 ದಶಲಕ್ಷ ಅಫ್ಘನ್ ನಿರಾಶ್ರಿತರ ಸಹಿತ ಎಲ್ಲಾ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ನಿರ್ಧಾರ ಅಂತರಾಷ್ಟ್ರೀಯ ನಿಯಮಕ್ಕೆ ಅನುಗುಣವಾಗಿ ಇರುವುದರಿಂದ ತನ್ನ ಯೋಜನೆಯನ್ನು ಮುಂದುವರಿಸುವುದಾಗಿ ಪಾಕ್ ಸರಕಾರ ಹೇಳಿದೆ.

ಯುರೋಪ್ ಆಗಲಿ, ಏಶ್ಯಾ ಆಗಲಿ ಅಥವಾ ನಮ್ಮ ನೆರೆಹೊರೆಯಲ್ಲಾಗಲಿ, ಯಾವುದೇ ದೇಶವು ಅಕ್ರಮ ಜನರನ್ನು ತನ್ನ ದೇಶದಲ್ಲಿ ವಾಸಿಸಲು ಅನುಮತಿಸುವುದಿಲ್ಲ. ಆದ್ದರಿಂದ ಅಂತರಾಷ್ಟ್ರೀಯ ನಿಯಮಗಳಿಗೆ ಅನುಗುಣವಾಗಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಪಾಕಿಸ್ತಾನದ ಉಸ್ತುವಾರಿ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಯಾವುದೇ ಸಮಸ್ಯೆ ಎದುರಾದಾಗ ಜನರು ಪಾಕಿಸ್ತಾನಕ್ಕೆ ವಲಸೆ ಹೋಗುತ್ತಾರೆ, ಪಾಕಿಸ್ತಾನದಲ್ಲಿ ಆಶ್ರಯ ಪಡೆಯುತ್ತಾರೆ. ಆದರೆ 40ಕ್ಕೂ ಹೆಚ್ಚು ವರ್ಷಗಳಿಂದ ಇದು ನಡೆಯುತ್ತಿದೆ. ಆದ್ದರಿಂದ ಪಾಕ್ ಸರಕಾರ ಒಂದು ನಿರ್ಧಾರಕ್ಕೆ ಬಂದಿದೆ. ಅಫ್ಘಾನ್‍ನಲ್ಲಿ ಈಗ ಪರಿಸ್ಥಿತಿ ಸುಧಾರಿಸಿದೆ. ವಲಸಿಗರ ಬಿಕ್ಕಟ್ಟಿನ ವಿಷಯವನ್ನು ಅಫ್ಘಾನಿಸ್ತಾನದ ಜತೆ ದೀರ್ಘಾವಧಿಯಿಂದ ಚರ್ಚಿಸುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ಅಂತರಾಷ್ಟ್ರೀಯ ಮಾನವೀಯ ನೆರವಿನ ಏಜೆನ್ಸಿಗಳು ನೆರವು ನೀಡಬೇಕಾಗಿದೆ ಎಂದವರು ಆಗ್ರಹಿಸಿದ್ದಾರೆ.

ಪ್ರತ್ಯೇಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಪಂಜಾಬ್ ಪ್ರಾಂತದ ಉಸ್ತುವಾರಿ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ, ಪ್ರಾಂತೀಯ ಅಧಿಕಾರಿಗಳು ವಿದೇಶಿ ನಿವಾಸಿಗಳ ಮಾಹಿತಿಯನ್ನು ಸಂಗ್ರಹಿಸಿದ್ದು ಪಂಜಾಬ್ ಪ್ರಾಂತದಲ್ಲಿ ಅಕ್ರಮವಾಗಿ ನೆಲೆಸಿರುವ ಎಲ್ಲಾ ವಿದೇಶಿ ಪ್ರಜೆಗಳೂ ಸ್ವಯಂಪ್ರೇರಣೆಯಿಂದ ನಿರ್ಗಮಿಸುವಂತೆ ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News